LATEST NEWS
ದಿನಕ್ಕೊಂದು ಕಥೆ- ಮೋಡದ ಕತೆ
ಮೋಡದ ಕತೆ
ನನ್ನಜ್ಜನಿಗೆ ಕೋಪ ಬಂದಾಗ ಹೇಳ್ತಿದ್ರು ,ಅಂದ್ರೆ ನಾನು ತಪ್ಪು ಮಾಡಿದಾಗ ಹೇಳುತ್ತಿದ್ದರು, “ನೀನು ಕಾಡಿಗೆ ಹೋಗಿ ಬರಬೇಕಿತ್ತು”. ಇದು ನನಗೆ ಅಂತಲ್ಲ ಯಾರು ತಪ್ಪು ಮಾಡಿದಾಗಲೂ ಇದೇ ಮಾತು ಹೇಳ್ತಾ ಇದ್ರು .ನನಗೆ ಯಾಕೆ ಕಾಡಿಗೆ ಹೋಗಬೇಕು ಅಂತ ಗೊತ್ತಾಗ್ತಾ ಇರಲಿಲ್ಲ. ಅಲ್ಲದೇ ಅದನ್ನ ಆಗ ಕೇಳುವ ಸ್ಥಿತಿಯಲ್ಲು ನಾನಿರಲಿಲ್ಲ. ಆದರೆ ನಿನ್ನೆ ಕೇಳಿದೆ ನಾನು ದೊಡ್ಡವನಾಗಿದ್ದೆ.
ಏನೂ ತಪ್ಪು ಕೂಡ ಮಾಡಿರಲಿಲ್ಲ. ಅಜ್ಜನೂ ಮಾತನಾಡುವ ಮನಸ್ಸಿನಲ್ಲಿದ್ರು.” ನೀವು ಹೇಳ್ತಿದ್ರಲ್ಲ ಕಾಡಿಗೆ ಹೋಗಬೇಕು ಅಂತ, ಯಾಕೆ ಅಜ್ಜಾ” ” ಸರಿ ಹೇಳ್ತೀನಿ ಕೇಳು,ನೋಡು ನಮ್ಮ ರಾಮಾಯಣ-ಮಹಾಭಾರತದಲ್ಲಿ ಧರ್ಮವಂತರು ಕಾಡಿಗೆ ಹೋಗಿ ಬಂದ ಮೇಲೆ ಇನ್ನಷ್ಟು ಧರ್ಮವಂತರಾಗಿ ರಾಜ್ಯವಾಳಿದರು, ಮೌಲ್ಯಗಳನ್ನು ಕಲಿತರು ,ಬುದ್ಧನು ಕಾಡಿಗೆ ಹೋಗಿ ಬಂದವನೇ, ಹಿಂದೆ ಋಷಿ-ಮುನಿಗಳು ಕಾಡೋಳಗೆ ಬದುಕಿದವರು,ಯಾಕೆಂದರೆ ಆ ಕಾಡೊಳಗೆ ಮೌಲ್ಯಗಳು ಜೀವಂತವಾಗಿ ,ಯಥೇಚ್ಛವಾಗಿ ಸಿಗುತ್ತವೆ.
ಬೇದಬಾವ ,ಮನಸ್ತಾಪ, ಅಸೂಯೆ ,ಕೋಪತಾಪಗಳು ಅಲ್ಲಿಲ್ಲ.ಪ್ರೀತಿ ದಯೆ ಧರ್ಮಗಳೆ ತುಂಬಿರುತ್ತದೆ. ಕಾಡಿನೊಳಗೆ ಸಾಗಿ ಬಂದಾಗ ನಮಗೆ ಜೀವನಸತ್ಯದ ಅರಿವಾಗುವುದು. ಅದೊಂದು ಪವಿತ್ರ ವಿಶ್ವವಿದ್ಯಾಲಯ .ಪಾಠಗಳು ಉಚಿತವಾಗಿ ಸಿಗುತ್ತವೆ.
ನಾವು ಆರಿಸಿಕೊಳ್ಳಬೇಕು ಅಷ್ಟೇ. ಅನುಭವ ಜ್ಞಾನ ಸಿಗುತ್ತದೆ. ಹುಟ್ಟಿನಿಂದ ಮನುಷ್ಯನಾದವ ಮಾನವನಾಗ ಬೇಕಾದರೆ ಒಮ್ಮೆಯಾದರೂ ಕಾಡಿನೊಳಗೆ ಹೋಗಿ ಬರಬೇಕು.
ನಿನಗಿದರ ಅನುಭವವಾಗಬೇಕಾದರೆ ತಿಳಿಯಾಗಿ ಹರಿಯೋ ನದಿ ತೀರದಲ್ಲಿ ,ಕಾಂಕ್ರೀಟಿನಿಂದ ತುಂಬ ದೂರದ ಹಸಿರು ಕಾಡಿನಲ್ಲಿ ಕುಳಿತು ಬಾ ಒಂದಿಡೀ ದಿನ.ಅದರ ಸಣ್ಣ ಸುಳಿವು ಸಿಗಬಹುದು” ಅಜ್ಜನ ಮಾತು ಹೌದು ಅನ್ನಿಸ್ತು. ನಾನು ಕಾಡೊಳಗೆ ಹೋಗಬೇಕು ಅನ್ನೋದನ್ನ ತೀರ್ಮಾನಿಸಿದ್ದೇನೆ. ನೀವು …..
ಧೀರಜ್ ಬೆಳ್ಳಾರೆ