LATEST NEWS
ದಿನಕ್ಕೊಂದು ಕಥೆ- ಕಳೆದುಕೊಂಡಿರುವುದು

ಕಳೆದುಕೊಂಡಿರುವುದು
ಅವನು ಮನೆಯಿಂದ ಹೊರಬಿದ್ದ. ತುಂಬಾ ದಿನಗಳ ನಂತರ.ಮತ್ತದೇ ಗದ್ದಲ,ಶೇಂಗಾ ಮಾರುತ್ತಿರುವ ಅಜ್ಜಿ ,ಮೂಲೆ ಅಂಗಡಿ ರಾಜಯ್ಯ, ಜೋರಾಗಿ ಹೆಚ್ಚಿದ ಬಿಸಿಲು .ಹೊರಗೆ ಎಂದಿನಂತೆ ಇದೆ. ಅವನೊಳಗೆ ಮಾತ್ರ ಒಂದಿಷ್ಟು ಬದಲಾವಣೆಗಳಾಗಿವೆ.
ಸತೀಶನನ್ನು ಕಳೆದುಕೊಂಡು ದಿನ ಎಂಟಾಯಿತು . ಇಂದು ಹೊರ ಬಂದಿದ್ದಾನೆ. ಅವನೊಂದಿಗೆ ಆತ್ಮೀಯರಾಗಿದ್ದ ಎಲ್ಲರೂ ಬಂಧನದಿಂದ ಮುಕ್ತರಾಗಿದ್ದಾರೆ. ಆದರೆ ಇವನಿಗೆ ಆಗುತ್ತಿಲ್ಲ. ಕಣ್ಣೆದುರು ವಿಲವಿಲನೆ ಒದ್ದಾಡಿದ ಆ ದೃಶ್ಯ, ಒಮ್ಮೆ ಮೈ ಜಲಧರಿಸುತ್ತದೆ. ಸಾಯುವ ಕಡೆ ಕ್ಷಣದಲ್ಲಿ ಅವನ ಭಾವನೆಗಳೇನು?, ಏನು ಹೇಳೋಕೆ ಹೊರಟಿದ್ದ?, ಹೇಗೆ ಸಹಿಸಿಕೊಂಡ?, ಗೊತ್ತಿಲ್ಲ.

ತಾನು ಆತ್ಮೀಯ ಗೆಳೆಯ ನನ್ನ ಮರೆತು ಮುಕ್ತನಾಗುವುದು ಹೇಗೆ .ಹೀಗೆಲ್ಲಾ ಅನ್ನಿಸಬಾರದು ,ಅನ್ನಿಸಿಕೊಳ್ಳಲುಬಾರದು…
ಅವನ ಹೆಜ್ಜೆ ರಸ್ತೆಗಿಳಿಯಿತು. ಸೋತು ಹೋಗಿದ್ದ ಕಾಲುಗಳು, ಹೈರಾಣಾಗಿದ್ದ ಮನಸ್ಸು. ಹಳೆಯಗುಂಡಿ ,ಮುರಿದು ಬಿದ್ದ ಎದುರುಮನೆ ಕಾಂಪೌಂಡು, ಕೊಳಚೆ ತುಂಬಿದ ಗಟಾರ,
ಒಂಟಿಯಾಗಿ ನಿಂತಿರುವ ಮನೆ, ಇಷ್ಟು ದಿನ ಸತೀಶ ಜೊತೆಗಿದ್ದಾಗ ಕಾಣಿಸದಿದ್ದರೂ ಇಂದು ಇವನನ್ನೇ ನೋಡುತ್ತಿವೆ .ಇವನ ಒಳಗಿಂದ ಹೊರಟುಹೋದ ಶಾಂತಿ ಮತ್ತು ಬೆಳಕನ್ನು ಮತ್ತೆಲ್ಲಿ ಹುಡುಕುತ್ತಾನೋ ಗೊತ್ತಿಲ್ಲ. ಬೇಡವೆಂದರೂ ಹೆಜ್ಜೆ ಮಸಣದ ಕಡೆಗೆ ನಡೆದಿದೆ…. ಕಳೆದುಕೊಂಡ ತೀವ್ರತೆಯೂ ಕಾಡುತ್ತಲೇ ಇದೆ ಅವನಿಗೆ…,
ಧೀರಜ್ ಬೆಳ್ಳಾರೆ