LATEST NEWS
ದಿನಕ್ಕೊಂದು ಕಥೆ- ಅನಾರೋಗ್ಯಕ್ಕೆ ಮದ್ದೆಲ್ಲಿ
ಅನಾರೋಗ್ಯಕ್ಕೆ ಮದ್ದೆಲ್ಲಿ
ರಸ್ತೆ ನೇರವಾಗಿದೆ ಕೊನೆ ಕಾಣುತ್ತಿಲ್ಲ .ಆ ಕೊನೆಯನ್ನು ಬೇಗ ತಲುಪಬೇಕು ಅನ್ನುವ ಕಾರಣಕ್ಕೆ ಇಲ್ಲಿ ಗಾಡಿಯ ವೇಗ ಹೆಚ್ಚುತ್ತದೆ. ಚಕ್ರಗಳ ತಿರುಗುತ್ತಾ ನೆಲವನ್ನು ಬಿಟ್ಟು ಮೇಲೇರುತ್ತವೆ. ಕ್ಷಣದ ಆಯ ತಪ್ಪುವಿಕೆ ,ಮುಖಾಮುಖಿ ಘರ್ಷಣೆ, ದೊಡ್ಡ ಶಬ್ದ, ಗಾಡಿಯೊಳಗಿನ ದೇಹದಿಂದ ರಕ್ತ ಇಳಿಯುತ್ತಿದೆ. ಅಲ್ಲೇ ಬಿದ್ದಿದ್ದ ಅವಳನ್ನ ಆಗತಾನೇ ಗಾಡಿ ನಿಲ್ಲಿಸಿದ ವ್ಯಕ್ತಿಯೊಬ್ಬ ಗಮನಿಸಿದ. ತುರ್ತುಚಿಕಿತ್ಸೆಯ ಅಗತ್ಯವಿತ್ತು.
ಆಂಬುಲೆನ್ಸ್ ಗೆ ಕಾಯದೆ ತನ್ನದೇ ಕಾರಿನೊಳಗೆ ಮಲಗಿಸಿ ಆಸ್ಪತ್ರೆಗೊಯ್ದ. ಹಾ ಅವನು ಸ್ವತಃ ವೈದ್ಯನೇ. ಜೀವ ಉಳಿಸುವುದೇ ಮುಖ್ಯವಾಗಿತ್ತು . ಆಸ್ಪತ್ರೆ ತಲುಪಿದ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿತ್ತು. ಕೊನೆಯ ಕ್ಷಣದ ಪ್ರಯತ್ನವೂ ಫಲಿಸಲಿಲ್ಲ. ವೈದ್ಯನಿಗೆ ” ಉಳಿಸಲಾಗಲಿಲ್ಲ” ಅನ್ನುವ ಸಣ್ಣ ನೋವು ಕಾಡುತ್ತಿತ್ತು.
ಆಸ್ಪತ್ರೆ ಹೊರಗೆ ಜನ ಗುಂಪಾಗುತ್ತಿದ್ದಾರೆ. ಮಾತುಕತೆಗಳು ವೇಗ ಪಡೆದುಕೊಂಡಿದ್ದಾವೆ.
“ಯಾವನೋ ಅವನು ಆಸ್ಪತ್ರೆಗೆ ತಂದವ ”
“ಆಂಬುಲೆನ್ಸಿಗೆ ಕಾಯಬಹುದಿತ್ತು ಅಲ್ವಾ”
“ನನ್ನ ಮಗಳ ಸಾವಿಗೆ ಅವನೇ ಕಾರಣ”
ರಭಸದ ಮಾತುಗಳೊಂದಿಗೆ ಮತಿ ತಪ್ಪಿದ ಜನರು ಒಳ ನುಗ್ಗಿದರು. ಉಳಿಸಲಾಗಲಿಲ್ಲ ಅನ್ನುವ ನೋವಿನಲ್ಲಿ ಇದ್ದ ವೈದ್ಯರ ಮೇಲೆ ಹಲ್ಲೆಯಾಯಿತು. ಜನ ಹೊರಟು ಹೋಗುತ್ತಿದ್ದಾ ಹಾಗೇ ವೈದ್ಯನ ಪ್ರಾಣವೂ ದೇಹವನ್ನು ತೊರೆದಿತ್ತು. ಪ್ರಾಣ ಉಳಿಸಲು ಯತ್ನಿಸಿದ್ದಕ್ಕೆ ಪ್ರಾಣವೇ ಹೋಗಿತ್ತು. ಎರಡೂ ಮನೆಯಲ್ಲಿ ಸೂತಕದ ಛಾಯೆ ,ಚಿತೆಗಳು ಉರಿಯುತ್ತಿವೆ.
” ನಾನೀಗ ಆಪರೇಷನ್ ಮಾಡಿ ವ್ಯಕ್ತಿಯ ಪ್ರಾಣವೆಲ್ಲಿಯಾದರೂ ಹೋದರೆ”
“ನನ್ನ ಮದ್ದಿನಿಂದ ವ್ಯಕ್ತಿಯೇನಾದರೂ ಮರಣಿಸಿದರೆ ”
“ನನ್ನ ಮನೆಯಲ್ಲೂ ಚಿತೆ ಉರಿಯಬಹುದು ”
ಹೀಗೆಂದು ವೈದ್ಯನೊಬ್ಬ ಯೋಚಿಸಿದರೆ…………
ಅನಾರೋಗ್ಯಕ್ಕೆ ಮದ್ದಲ್ಲಿ ದೊರೆಯುವುದು……
ಧೀರಜ್ ಬೆಳ್ಳಾರೆ