LATEST NEWS
ದಿನಕ್ಕೊಂದು ಕಥೆ- ಬುದ್ಧಿಮಾತು
ಬುದ್ಧಿಮಾತು
ಅಪ್ಪನ ಕೋಳಿ ಅಂಕದ ಕಲದಲ್ಲಿ ನಮ್ಮನೆ ಹುಂಜ ಅದ್ವಿತೀಯ ಪ್ರದರ್ಶನ ತೋರಿ ಮನೆಗೆ ಪದಾರ್ಥಕ್ಕೆ ಇನ್ನೊಂದು ಕೋಳಿಯನ್ನು ಜೊತೆಗೆ ತಂದಿತ್ತು. ಆದರೆ ತನ್ನ ಬಲ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿತ್ತು. ಮನೆಯಲ್ಲಿ ಅದಕ್ಕೆ ಶಸ್ತ್ರಕ್ರಿಯೆ ನಡೆದು ಕೋಳಿ ಮತ್ತೆ ಬದುಕಿತು ಒಂಟಿಕಾಲಿನೊಂದಿಗೆ.
ಆ ದಿನ ತೆಂಗಿನ ಮರದ ಬುಡದಲ್ಲಿ ಕೋಳಿ ಆಹಾರ ಹುಡುಕುತ್ತ ಇರುವಾಗ ನಮ್ಮನೆ ಬೆಕ್ಕು ಅದರೊಂದಿಗೆ ಮಾತುಕತೆಗಿಳಿಯಿತು. “ಅಲ್ಲಾ ಮಾರಾಯ ನಿಂಗೆ ಸುಮ್ಮನೆ ಗೂಡಿನೊಳಗೆ ಇರೋಕಾಗಲ್ವಾ?, ನಿನ್ನ ಕಾಲು ಮುರಿದು ಹೋಗಿದೆ ಅದೇ ಕನಿಕರದಿಂದ ಯಜಮಾನ್ರು ಕಾಳುಗಳನ್ನ ಗೂಡೊಳಗೆ ತಂದ ಹಾಕ್ತಾರೆ. ಸುಮ್ಮನೆ ಯಾಕೆ ಕಷ್ಟಪಡುತ್ತಾ ಇದ್ದೀ?.
” ಮಾರಾಯ ಹಾಗೆ ಮಾಡಿದರೆ ನನಗೆ ಆಲಸ್ಯ ಅಂಟಿಕೊಳ್ಳುತ್ತೆ. ಮುಂದೊಂದಿನ ಯಜಮಾನನಿಗೆ ನಾನು ವ್ಯರ್ಥ ಅನ್ನಿಸಬಹುದು. ನನ್ನ ಆಹಾರ ನಾನೇ ಹುಡುಕಿದರೆ ಒಳ್ಳೇದಲ್ವಾ? ನನ್ನ ಒಂದು ಕಾಲು , ಕೈ ,ಕೊಕ್ಕು ಎಲ್ಲ ಚೆನ್ನಾಗಿದೆ. ನಾನು ತಿಪ್ಪೆ ಸವರಿ ಆಹಾರ ಹುಡುಕುತ್ತೇನೆ. ದೂರ ತುಂಬಾ ಹೋಗೋಕಾಗಲ್ಲ ಅನ್ನೋದು ಬಿಟ್ಟರೆ ನನ್ನ ಆಹಾರವನ್ನು ನಾನೇ ಸಂಪಾದಿಸುತ್ತೇನೆ. ಸಣ್ಣ ಪುಟ್ಟ ವಿಚಾರಗಳಿಗೆ ಮೂಲೆಗೆ ಒರಗಬಾರದು”.
” ನೀನು ಏನು ಬೇಕಾದರು ಮಾಡು ನನಗೆ ಒಳಗೆ ಹಾಲಿದೆ ನಾ ಬರುತ್ತೇನೆ” ಕೋಳಿ ಮತ್ತೆ ನೆಲದಲ್ಲಿ ತೆವಳುತ್ತಾ ಆಹಾರ ಹುಡುಕುತ್ತಿತ್ತು. ನಾನು ತೋಟದ ಕಡೆಗೆ ಹುಲ್ಲು ತರೋಕೆ ಹೊರಟೆ. ಅಮ್ಮ ಕೇಳಿದ್ರು” ಏನೂ ತಲೆನೋವು ಮಲ್ಕೋತೇನೆ ಅಂದಿದ್ದೀ..”…………..
ಧೀರಜ್ ಬೆಳ್ಳಾರೆ