LATEST NEWS
ದಿನಕ್ಕೊಂದು ಕಥೆ- ಭಾರ
ಭಾರ
ಶಾಲೆಗೆ ತಲುಪುವ ಹಾದಿ ತುಂಬಾ ದೂರ ಇದೆ. ನಡೆಯುತ್ತಾ ಸಾಗಬೇಕು ತನ್ನ ಮಗಳ ಜೊತೆ ಹೆಜ್ಜೆ ಹಾಕುತ್ತಿದ್ದಾನೆ ರಮೇಶ. “ಅಪ್ಪ ಬ್ಯಾಗು ತುಂಬಾ ಭಾರ. ಸ್ವಲ್ಪ ಹಿಡಿತಿಯ. ಹೆಜ್ಜೆ ಇಡೋಕಾಗಲ್ಲ .ನೋವಾಗ್ತಿದೆ” . ಮಗಳ ಮುಖ ನೋಡಿ ಬ್ಯಾಗು ಹೆಗಲಿಗೇರಿಸಿ ಯೋಚಿಸಿದ. “ಶಿಕ್ಷಣ ಭಾರವಾಗಿದೆ !ಹಣದೊಂದಿಗೆ.
ಮನಸ್ಸಿಗಿಂತ ಬ್ಯಾಗುಗಳಿಗೆ ತುಂಬಿಸುವುದೇ ಹೆಚ್ಚು. ಅಲ್ಲಾ, ನನಗೆ ಮಗಳಿಗೆ ಭವಿಷ್ಯದ ಭಾರವನ್ನು ಹೊರಲು ಕಲಿಸುವುದೆಲ್ಲಿ?ನಾನೀಗ ಹೊರುತ್ತೇನೆ. ಅದಕ್ಕವಳು ನೆಮ್ಮದಿಯ ಹೆಜ್ಜೆಯನ್ನು ಇಡ್ತಾ ಇದ್ದಾಳೆ. ಮುಂದೆ ?ಮುಂದೆ ತೀರದ ಪಯಣವಿದೆ. ಅವಳು ಸಾಗಬೇಕಲ್ಲಾ. ನಾಳೆಗಳು ಇನ್ನೂ ಭಾರವಾಗಬಹುದು.
ಮೈಯರಳಿ ನಿಂತಾಗ ಬೀದಿ ಕಾಮುಕರು, ಅಸೂಯೆ ಕಣ್ಣುಗಳು, ನೋವಿನ ಬಲೆಯನ್ನು ಹರಡಬಹುದು ದಾರಿಯಲ್ಲಿ .ಮದುವೆಯ ಮಂಟಪದಲ್ಲಿ ಬೆಲೆ ಕಟ್ಟುತ್ತಾರೆ, ಬಂಗಾರ ಮನೆತನ ಎಲ್ಲವನ ತೂಕಕ್ಕೆ ಹಚ್ಚುತ್ತಾರೆ. ಕಣ್ಣೀರಿನ ಭಾರವನ್ನು ತಡೆಯಬೇಕು.
ಹೆಂಡತಿ, ತಾಯಿ, ಅಜ್ಜಿ ಈ ಸಂಬಂಧದ ಭಾರವನ್ನು ಸಂಭ್ರಮದಿಂದ ಹೊರಲೇಬೇಕು. ಇದು ಕೆಳಗಿಳಿಸಲಾಗದ ಭಾರ. ಸಾಗಲೇಬೇಕಾದ ದೂರ”.”ಅಪ್ಪಾ”ಎಲ್ಲವೂ ನೆನಪಾದಾಗ ಶಾಲೆಯ ಗೇಟು ಹತ್ತಿರವಾಗಿತ್ತು. ಮತ್ತೆ ಬ್ಯಾಗು ಮಗಳಿಗೆ ಹಸ್ತಾಂತರಿಸಿದ. ಅವಳು ಹೆಗಲನ್ನು ಅಲ್ಲಾಡಿಸುತ್ತಾ ಒಳನಡೆದಳು.ಭಾರ ಅಭ್ಯಾಸವಾಗಬೇಕಾಗಿದೆ …….