LATEST NEWS
ದಿನಕ್ಕೊಂದು ಕಥೆ- ನನ್ನ ದೇವರು
ನನ್ನ ದೇವರು
“ಬದುಕು ಮೌನವಾಗಿರುವಾಗ ಕಾಲಿಟ್ಟವನು ಅವನು. ಅಂದಿನಿಂದ ಶಬ್ದಗಳಿಗೆ ಅರ್ಥ ಸಿಕ್ಕಿತು. ಮೌನವೇ ಬೇಡವೆನಿಸಿತು.ತೊದಲು ನುಡಿಯಿಂದಾನೆ ಎಲ್ಲವನ್ನು ಅರ್ಥೈಸುತ್ತಿದ್ದಾನೆ. ಹೆಣ್ಣಾಗಿದ್ದವಳಿಗೆ ತಾಯ್ತನ ನೀಡಿ ಬದುಕಿನ ಹೊಸ ದಾರಿ ತೋರಿಸಿದ. ಅವನ ಪಾದಗಳು ಎದೆಯ ಮೇಲೆ ಊರಿ ನಡೆಯುತ್ತಿದ್ದರೆ ನೆಮ್ಮದಿ ಉಸಿರಾಡುತ್ತದೆ. ತುಂಟಾಟಗಳು ಮನ ಮುದಗೊಳಿಸಿದೆ.
ಕತ್ತಲಲ್ಲಿದ್ದ ಮನೆಗೊಂದು ಬೆಳಕಾಗಿ ಅಂಬೆಗಾಲಿಟ್ಟವ. ಈಗ ಮನೆ ನಂದಗೋಕುಲವಾಗಿದೆ . ಅವನಿಗೆ ಎಲ್ಲರ ಬಗ್ಗೆಯೂ ಪ್ರೀತಿ ,ಯಾವುದನ್ನು ಬೇದಬಾವಗಳಿಂದ ನೋಡೋದೇ ಇಲ್ಲ .ದ್ವೇಷ ಅಸೂಯೆಗಳು ಇನ್ನೂ ಅವನ ಮನದೊಳಗೆ ಪ್ರವೇಶಿಸಿಲ್ಲ. ಕಪಟವಿಲ್ಲದ ಮನಸ್ಸು ಅವನದು. ಇವೆಲ್ಲವೂ ಹೀಗೆಯೇ ಉಳಿಯಲಿ ಅನ್ನೋದು ಬೇಡಿಕೆಯಷ್ಟೆ. ‘ಬಂದೇ ‘ ಅವನು ಅಳುತ್ತಿದ್ದಾನೆ . ಹಾಲು ಕೊಡಬೇಕು. ಅವನ ಬಗ್ಗೆ ಎಷ್ಟೊಂದು ಮಾತನಾಡೋದು. ಬನ್ನಿ ಒಳಗೆ ಅವನನ್ನ ನೀವೇ ನೋಡುವಿರಂತೆ” ಅತ್ತಿಗೆ ಇಷ್ಟು ಹೇಳಿ ಒಳನಡೆದರು.
ಅವರ ಸಂಭ್ರಮ ಇಮ್ಮಡಿಗೊಂಡಿತು. ನೋವನ್ನ ಮರೆತಿದ್ದರು. ಬದುಕು ಹೊಸ ದಾರಿಯನ್ನು ಹುಡುಕಿತ್ತು. ಅವನು ಬದಲಾಯಿಸಿದ್ದಾನೆ ಎಲ್ಲವನ್ನು. ನಾನು ಅವನನ್ನ ಎದುರುಗೊಳ್ಳಲು ಒಳನಡೆದೆ ನೆಮ್ಮದಿಯಿಂದ. ಅವನು ನಮ್ಮ ಮನೆ ದೇವರಾಗಿದ್ದ …ದೇವರು ಬಯಸಿದ್ದನ್ನ ನೀಡುತ್ತಾನಂತಲ್ಲ ಅದಕ್ಕೆ
ಧೀರಜ್ ಬೆಳ್ಳಾರೆ