LATEST NEWS
ದಿನಕ್ಕೊಂದು ಕಥೆ- ಬಾಗಿಲು ಮುಚ್ಚಿದೆ
ಬಾಗಿಲು ಮುಚ್ಚಿದೆ
ಅಲ್ಲೊಂದು ಮುಚ್ಚಿದ ಬಾಗಿಲಿದೆ. ಆ ಮುಚ್ಚಿದ ಬಾಗಿಲಿನ ಒಳಗೂ ಯಾರು ಇಲ್ಲ ಹೊರಗೂ ಯಾರು ಇಲ್ಲ. ಗೋಡೆ ಬೀಳುವಷ್ಟು ಶಿಥಿಲವೇನು ಅಲ್ಲ .ಗೊತ್ತಾಗುತ್ತಿಲ್ಲ ಇಲ್ಲಿ ಗೋಡೆ ಬಾಗಿಲನ್ನು ಹಿಡಿದಿದೆಯೋ ಬಾಗಿಲು ಗೋಡೆಯನ್ನು ಹಿಡಿದಿದೆಯೋ ಅಂತ.
ಬಾಗಿಲನ್ನು ನೂಕಲಾಗದೆ ಸಂಧಿಯಿಂದ ಒಳಗಿಣುಕಿದರೆ ಕಾಣಿಸದೇ ಇರುವ ಕತ್ತಲು ನಿಧಾನವಾಗಿ ಹೊರ ಹೋಗಲು ತವಕಿಸುತ್ತಿದೆ. ಅಲ್ಲಿ ಬಾಗಿಲು ಮುಚ್ಚಿದೆಯಾದರೂ ಕಾಲ ನಿಲ್ಲುತ್ತಿಲ್ಲ .ಹೆಜ್ಜೆಗಳನ್ನು ಊರಿ ಊರಿ ಚಲಿಸುತ್ತಲೇ ಇದೆ .ಆ ಬಾಗಿಲೊಳು ಅಂದರೆ ಒಳಗೆ ಕನಸು ಕುಂದಿದೆಯೋ, ಅಥವಾ ಗಾನಕ್ಕೆ ಸ್ವರ ಸಿಗದಾಗಿದೆಯೋ, ನೃತ್ಯ ಲಯ ತಪ್ಪಿದೆಯೋ, ಚಲಿಸದೆ ಇರುವ ಗಿಳಿ ಬೋಳು ಮರದಲ್ಲಿ ಕೂತಂತಿದೆಯೋ, ಕಬ್ಬಿಣದ ಬೋನಲ್ಲಿ ಪಳಗಿಸದ ಮೃಗವೊಂದರ ಹಾಗಿದೆಯೋ ಗೊತ್ತಿಲ್ಲ.
ಆದರೆ ಒಳಗೇನು ಸಂಭವಿಸುತ್ತಿದೆ. ಕಾಣುತ್ತಿಲ್ಲ, ಒಳಗೆ ಕತ್ತಲಲ್ಲವೇ. ಬಾಗಿಲ ಬಡಿತ ಕೇಳಿದರೆ ಯಾರಾದರೂ ತೆರೆದಾರು. ಒಳಗಿಂದ ಅಥವಾ ಹೊರಗಿಂದ. ಕುತೂಹಲವೆನಿಸಿದೆ ಹೋದರೆ ಹತ್ತಿರ ಯಾರು ಯಾಕೆ ಸುಳಿಯುತ್ತಾರೆ. ಬಾಗಿಲು ಕಾಯುತ್ತಿದೆ. ತೆರೆಯಲು. ಬಾಗಿಲಿಗೆ ಅರಿವಿಲ್ಲ, ಕಾರಣವಿಲ್ಲದೆ ಬಾಗಿಲ ತೆರೆಯೋರು ಸದ್ಯಕ್ಕಂತೂ ಸಿಗೋದೆ ಇಲ್ಲ ಅಂತ. ಆದರೂ ಬಾಗಿಲು ಮುಚ್ಚಿಕೊಂಡೆ ಕಾಯುತ್ತಿದೆ ಇಲ್ಲಿ. ಬೆಳಕು ಒಳಗೋಡುತ್ತದೋ, ಕತ್ತಲು ಹೊರಗಿಳಿಯುತ್ತದೋ ಗೊತ್ತಿಲ್ಲ .ತೆರೆದ ಮೇಲೆ ತಿಳಿಯಬೇಕಷ್ಟೆ ….
ಧೀರಜ್ ಬೆಳ್ಳಾರೆ