LATEST NEWS
ದಿನಕ್ಕೊಂದು ಕಥೆ- ಕಾಪಾಡುತ್ತಿದೆ
ಕಾಪಾಡುತ್ತಿದೆ
ಒತ್ತಾಯಪೂರ್ವಕವಾಗಿ ,ನಮ್ಮ ಉಳಿವಿಗೆ ಮನೆಯ ಬಾಗಿಲನ್ನು ಮುಚ್ಚಲಾಗಿದೆ. ಅಲ್ಲೊಂದು ಮನೆಯೊಳಗಿಂದ ಸಣ್ಣದಾಗಿ ಹಸಿವಿನ ಅಳು ನಿಮಗೆ ಕೇಳುಸ್ತಾ ಇಲ್ವಾ?. ದಿನದ ದುಡಿಮೆಯನ್ನು ನಂಬಿದ ಮನೆಗಳು ಅವು.
ಕಾಡಿನೊಳಗಡೆ ಸಣ್ಣ ಸೂರು ಕಟ್ಟಿ ಯಾರದೋ ತೋಟಕ್ಕೆ ಹೋಗಿ ಹೊಟ್ಟೆ ಹೊರೆಯುತ್ತಿದ್ದವು.ಎಲ್ಲಾ ಕಡೆ ಶಬ್ದ ಮೌನವಾದಾಗ, “ಇದು ಮುಗಿಯುವರೆಗೂ ತೋಟದ ಕಡೆಗೆ ಬರೋದು ಬೇಡ” ಅಂದರು ಧಣಿಗಳು . ಸರಕಾರದ ಅಕ್ಕಿ ಅಲ್ಲಿಂದಲ್ಲಿಗೆ ಸಾಲುತ್ತಿತ್ತು. ಹೊಟ್ಟೆ ಕೇಳಬೇಕಲ್ಲ. ಮನೆಯಲ್ಲಿ ಮಗುವಿನ ಅಳು, ಬಾಣಂತಿಯರ ಕೂಗು, ಇದಕ್ಕೆ ಉತ್ತರ ನೀಡೋಕೆ ಕಾಡಿನ ಒಳಗಡೆ ನಡೆದಿದ್ದಾರೆ.
ಅಂಗಡಿಯಲ್ಲಿ ದುಡ್ಡು ನೀಡಿದರೆ ಮಾತ್ರ ವಸ್ತು ಸಿಗುವುದು ,ಮೊದಲೇ ನಂಬಿದ ಕಾಡು ಹಾಗಲ್ಲವಲ್ಲ, ಇಷ್ಟು ದಿನ ಇವರು ಆ ಕಡೆ ಚಲಿಸದೆ ಇದ್ದರೂ ತನ್ನೊಳಗೆ ಒಂದಷ್ಟು ಗೆಡ್ಡೆಗೆಣಸುಗಳನ್ನು ತುಂಬಿಟ್ಟು ಅವರನ್ನ ಕಾಯುತ್ತಿತ್ತು. ಅವರನ್ನು ಪ್ರೀತಿಯಿಂದ ಒಪ್ಪಿಕೊಂಡಿತ್ತು. ಇವರು ಅದನ್ನ ಅಪ್ಪಿಕೊಂಡರು.
ಹಸಿವು ಮತ್ತೆ ಕರೆದೊಯ್ದಿದೆ. ಹಳೆಯ ನೆನಪಿನ ಕಾಡಿನೊಳಗಡೆ. ಬದುಕು ಕಟ್ಟಿಕೊಳ್ಳಲು ನಾಡು ಕರೆದಿತ್ತು ,ನಾಡು ಕೈಕೊಟ್ಟಾಗ ಮತ್ತೆ ತವರುಮನೆಯೇ ಗತಿಯಾಯಿತು. ಮಕ್ಕಳನ್ನು ಬೀದಿಗೆ ತಳ್ಳಲು ತಾಯಿ ತಯಾರಿಲ್ಲವಲ್ಲ. ಕಾಡು ಕಾಡದೆ ಕಾಪಾಡುತ್ತಿದೆ…. ಅವರು ಬೇಡದಿದ್ದರೂ
ಧೀರಜ್ ಬೆಳ್ಳಾರೆ