LATEST NEWS
ದಿನಕ್ಕೊಂದು ಕಥೆ- ಸಾವು

ಸಾವು
ನನಗಿದು ಆಶ್ಚರ್ಯದ ವಿಷಯ ನನಗಿದನ್ನು ನನ್ನ ಗೆಳೆಯ ಹೇಳಿದ್ದು, “ಅವರದು ಎಂಬತ್ತರ ವಯಸ್ಸಂತೆ ಜೀವನವನ್ನು ನೆಮ್ಮದಿಯಾಗಿ ನಡೆಸುತ್ತಿದ್ದವರಿಗೆ ಆ ದಿನ ಸಣ್ಣ ತಲೆನೋವು ಬಂದದಕ್ಕೆ ಡಾಕ್ಟರ್ ಬಳಿ ತೆರಳಿದರು.
ಅವರಿಗೆ ಒಂದಷ್ಟು ಪರೀಕ್ಷೆಗಳನ್ನು ಮಾಡಿ ಡಾಕ್ಟರಿಗೆ ಸ್ವತಃ ಅವರನ್ನು ಬಾಗಿಲ ಬಳಿ ಬಿಟ್ಟು ಬರುವ ಮನಸ್ಸಾಗಿ ಬಾಗಿಲ ಬಳಿ ಬಂದರು, ಅದಕ್ಕೆ ಆ ಹಿರಿಯ ನಗುತ್ತಾ “ಹೊರಡುತ್ತೇನೆ ಸಾರ್ ನನಗೆ ಇಲ್ಲೇನು ಕೆಲಸ ಇದೆ” ಎಂದು ಬೈಕನ್ನೇರಿ ಒಂದು ನಗೆಯನ್ನು ಬೀರಿ ಹೊರಟುಹೋದರು.

” ಅಪ್ಪ ನಾಳೆ ಬೇರೆ ಡಾಕ್ಟರ್ ಹತ್ರ ಹೋಗೋಣ” “ನಾಳೆ ಬೇಡ ಮಗ ನಾಡಿದ್ದು ಎಲ್ಲಾದರೂ ಕರೆದುಕೊಂಡು ಹೋಗು” “ಸರಿ ಅಪ್ಪ” “ಮಗ ಸ್ವಲ್ಪ ಮಲಗ್ತೇನೆ, ಇವತ್ತು ಪೂಜೆ ನೀನೆ ಮಾಡು” ” ಸರಿಯಪ್ಪ” ದೇವರ ಮಂಗಳಾರತಿ ಮುಗಿಯಿತು. ಪ್ರಸಾದ ನೀಡಿದ ಮಗ. ಅದನ್ನು ಪಡೆದ ಹಿರಿಯ ಜೀವ, “ಯಾಕೋ ಮನೆ ನಂಬರ್ ಸಿಕ್ತಿಲ್ಲ” “ಯಾವಕಡೆ ಹೋಗಬೇಕು ಗೊತ್ತಾಗುತ್ತಿಲ್ಲ?” ಅಂದವರು ಮೌನವಾಗಿ ಬಿಟ್ಟರು. ಪ್ರಸಾದ ಕೈಯಲ್ಲಿ ಉಳಿದಿತ್ತು.
ಬಾಯಿಗೂ ತಲುಪಿರಲಿಲ್ಲ. ಅವರಾಡಿದ ಕೊನೆಯ ಮಾತಿನ ಒಳಾರ್ಥವೇನು ಅರ್ಥವಾಗ್ಲಿಲ್ಲ ಮಗನಿಗೆ. ಡಾಕ್ಟರಿಗೆ ಫೋನಾಯಿಸಿದಾಗ “ಅವರು ಆಸ್ಪತ್ರೆಯಿಂದ ಹೊರಟಾಗ ಅವರ ಮುಖದಲ್ಲಿದ್ದ ನಗುವಿನಲ್ಲಿ ಅದೊಂತರ ಧ್ಯಾನವಿತ್ತು. ಯಾಕೋ ಕೊನೆಯ ನಗುವಿನಂತೆ ಅನಿಸ್ತಿತ್ತು.
ಏನು ಹೇಳಬೇಕು ಅನ್ನೋ ಸೂಚನೆ ಕೂಡ ಇತ್ತು ,ಆದರೆ ನನಗರ್ಥವಾಗಲಿಲ್ಲ “ಗೆಳೆಯನ ಈ ಮಾತನ್ನು ಕೇಳಿದ ನನಗೆ “ಸಾವು ಹೀಗೂ ಬರಬಹುದಲ್ಲಾ, ಅದೊಂದು ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ. ನಿಜದ ಅರಿವಿನಲ್ಲಿ ಇರುವಾಗ ಸಾವನ್ನ ಅನುಭವಿಸಲಿಕ್ಕೆ ಸಾಧ್ಯ ಇದಿಯಾ? ಗೊತ್ತಿಲ್ಲ. ಸಾವು ಸತ್ಯವಾದರೂ ಒಪ್ಪಿಕೊಳ್ಳೋಕೆ ನಾವು ತಯಾರಾಗಿಲ್ಲ ಅಲ್ವಾ ???
ಪ್ರಶ್ನೆಗಳೇ ಓಡಾಡ್ತಾ ಇದ್ದವು. ಸದ್ಯದ ಸಾವುಗಳನ್ನ ನೋಡಿ ಮನಸ್ಸು ಇದನ್ನ ಯೋಚಿಸಿದ್ದಾ ಗೊತ್ತಿಲ್ಲ.
ಧೀರಜ್ ಬೆಳ್ಳಾರೆ