LATEST NEWS
ದಿನಕ್ಕೊಂದು ಕಥೆ- ನಾನು ಕಾಡಾಗಬೇಕು

ನಾನು ಕಾಡಾಗಬೇಕು
ನಮ್ಮೂರಲ್ಲಿ ವರ್ಷವಿಡಿ ಒಬ್ಬೊಬ್ಬರದ್ದು ಒಂದೊಂದು ಕೆಲಸ ಆದರೆ ರಾಮಯ್ಯ ಮತ್ತು ಕರೀಂ ಅಜ್ಜನಿಗೆ ಮಾತ್ರ ಒಂದೇ ಕೆಲಸ. ಪ್ರತಿ ಮನೆಗೂ ಮರವಾಗುವ ಗಿಡಗಳನ್ನ ಹಂಚುವುದು. ಅದನ್ನು ಆಗಾಗ ಹೋಗಿ ನೋಡಿ ವಿಚಾರಿಸಿ ಬರುವುದು. “ಇನ್ನೊಂದೆರಡು ನೆಡಬಹುದಲ್ವಾ?” ಅಂತ ಕೇಳ್ತಾ ಇರೋದು .”ಇವತ್ಯಾರ ಮನೆನಾ ಕಾಡು ಮಾಡ್ತೀರಾ”ಅಂತ ಕೇಳ್ತಾನೆ ಇರುತ್ತಾರೆ.
ನಮ್ಮ ಮನೆಯಲ್ಲಿ ಒಂದೆರಡು ಗಿಡ ನೆಟ್ಟಿದ್ರು ಹಾಗಾಗಿ ಇವರನ್ನು ನೋಡಿ ಗೊತ್ತಿತ್ತೇ ಹೊರತು ಮಾತನಾಡಿಸಿರಲಿಲ್ಲ. ನಾನು ಆಗ ಮಾತನಾಡಿದರು ತಲೆ ಒಳಗೆ ಇಳಿತಾನೂ ಇರಲಿಲ್ಲ. ಹಾಗಾಗಿ ಇವತ್ತು ಮಾತನಾಡಿಸಿದೆ ” ಅಜ್ಜಾ ನಿಮಗೇ ಇದೇ ಕೆಲಸ ಮಾಡ್ತಾ ಇರೋಕೆ ಬೇಸರ ಆಗಲ್ವಾ?”, “ಬೇಸರ ಯಾಕೋ ಇದೇ ನಮ್ಮ ಆಸ್ತಿ. ನಾವೆಲ್ಲಿಗೆ ಬರೋದಕ್ಕಿಂತ ಮುಂಚೆ ಈ ಊರು ಕಾಡಾಗಿತ್ತು. ಜನ ಬರ್ತಾ ಬರ್ತಾ ಕಾಡು ಓಡಿಹೋಯಿತು.

ಮೂಲೆಯಲ್ಲಿದ್ದ ನಮ್ಮಿಬ್ಬರ ಮನೆ ಬಿಟ್ಟರೆ ಇದೆಲ್ಲ ಮತ್ತೇನೇ ಬಂದಿರೋದು. ಆಗಿರುವ ಕಾಡನ್ನ ಮತ್ತೆ ಬೇಡಿ ತರಲಿಕ್ಕೆ ಆಗುವುದಿಲ್ಲ ಅಲ್ವಾ? ಈ ಮಳೆಗಾಲದಲ್ಲಿ ರಸ್ತೆಯಲ್ಲಿ ಹಾವು ,ಕಪ್ಪೆ ಇಲ್ಲ ಸತ್ತುಹೋಗಿರುವುದನ್ನು ನೋಡಿದ್ಯಾ ಅಲ್ವಾ? ಯಾಕೆ ಗೊತ್ತಾ ! .ರಸ್ತೆ ಅಲ್ಲಿ ಮಲಗೋಕೆ ಮುಂಚೆ ಆ ಜಾಗ ಅವುಗಳದಾಗಿತ್ತು. ಅಭಿವೃದ್ಧಿ ಅಂತ ನಾವು ಹೆಸರಿಟ್ಟುಕೊಂಡು ರಸ್ತೆ ನಿರ್ಮಾಣ ಮಾಡಿದ್ದೇವೆ. ಅವುಗಳ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ .ನಾವು ಮಾತ್ರ ಬೆಳಿಬೇಕು ಅನ್ನೋದು ನಮ್ಮ ನಾಗರಿಕ ಬುದ್ಧಿ.
ಈ ಅಭಿವೃದ್ಧಿಯ ತೋಪುಗಳು ತುಂಬ ಇದ್ದಾವೆ. ಏನು ಉಪಯೋಗ ?ಕಾಡು ಉಳಿಸಿದ್ರೇನೇ ಎಲ್ಲವಕ್ಕೂ ಆಧಾರವಾಗಿರುತ್ತದೆ. ಊರ ಕಾಯುವ ಕೋಟೆ ಅದು. ಅದನ್ನು ಮುಗಿಸಿ ಸಹವಾಸಿಗಳ ವಾಸಿಸುವ ಮಸಣ ಕಟ್ಟಿದ್ದೇವೆ. ಅಲ್ಲಿ ಮಾನವ ಬಿಟ್ಟು ಬೇರೆ ಯಾರಿದ್ದಾರೆ. ಇದು ಅಭಿವೃದ್ಧಿಯಲ್ಲ ಮಗಾ!. ನಮ್ಮ ಊರಾದರೂ ಹಸಿರಾಗಿರಬೇಕು. ಅದಕ್ಕೆ ಗಿಡಾ ಕೊಡುತ್ತಿರುವುದು . ನಿನ್ನೊಳಗೆ ಕಾಡಾಗುವ ಯೋಚನೆಗಳು ಬರಲಿ.
ಹಾಗಂದ್ರೆ ನೀನು ಪ್ರಬುದ್ಧನಾಗ್ತೀಯಾ. ಕಾಡು ಅಂದ್ರೆ ಸುಲಭದಲ್ಲಿ ಆಗುವುದಿಲ್ಲ. ಎಲ್ಲವನ್ನು ಒಪ್ಪಿಕೊಂಡು ಅಭೇಧ್ಯನಾಗಿ ನಿಲ್ಲಬೇಕು ಆಯ್ತಾ. ಒಂದೇ ಸಲ ಹೇಳಿದರೆ ನಿನ್ನ ತಲೆ ಒಳಗೆ ಹೋಗುವುದಿಲ್ಲ ಆಗಾಗ ಒಂದಷ್ಟು ವಿಚಾರಗಳನ್ನು ಹೇಳ್ತಾ ಇರ್ತೇವೆ”. “ಹಾಗಾದ್ರೆ ನನಗೆ ಇನ್ನೊಂದೆರಡು ಗಿಡ ಕೊಡಿ ಅಜ್ಜ .ನನ್ನ ಮನೆ ಹತ್ರ ನೆಡುತ್ತೇನೆ. ನಾನು ಕಾಡಾಗಲಿಕ್ಕೆ ಪ್ರಯತ್ನ ಪಡುತ್ತೇನೆ.
ಧೀರಜ್ ಬೆಳ್ಳಾರೆ