LATEST NEWS
ದಿನಕ್ಕೊಂದು ಕಥೆ- ಕಾಯುತ್ತಿದ್ದಾನೆ
ಕಾಯುತ್ತಿದ್ದಾನೆ
“ನನ್ನಲ್ಲಿ ಜಾಗವಿದೆ ಆದರೆ ಮಾರಾಟಕ್ಕೆ ಇಟ್ಟಿಲ್ಲ. ನನ್ನೆದೆಯ ಪುಟ್ಟ ಗೂಡಿನಲ್ಲಿ ನನ್ನವಳಿಗೆ ಒಂದು ಸ್ಥಳಾವಕಾಶವಿದೆ .ಇಷ್ಟ ಬಂದವರು ಕೊಳ್ಳಲಾಗುವುದಿಲ್ಲ. ಯಾಕೆಂದರೆ ಮೊದಲ ಸಲ ಜಾಗವನ್ನು ಖರೀದಿಸಿಕೊಂಡವರು ಅಥವಾ ಆವರಿಸಿದವರು ಕಾರಣ ನೀಡದೇ ತೊರೆದಿದ್ದಾರೆ.
ಅದಕ್ಕೆ ಈ ಸಲ ನನ್ನದೂ ಒಂದಿಷ್ಟು ಕರಾರುಗಳನ್ನು ನೀಡುತ್ತಿದ್ದೇನೆ.ನನ್ನೆದೆಯಲ್ಲಿ ಒಂದು ಜಾಗ ನೀಡುತ್ತೇನೆ. ಅದರೊಳಗೆ ಪ್ರವೇಶಿಸಿದರೆ ಅಗುಳಿ ಹಾಕಿ ಜತನವಾಗಿ ಇರಿಸುತ್ತೇನೆ. ಮತ್ತೆ ತೊರೆದು ಹೋಗುವಂತಿಲ್ಲ.ಅತಿಯಾಗಿ ಪ್ರೀತಿಸುತ್ತೇನೆ ಎಂಬ ಹುಸಿ ಮಾತನ್ನು ನೀಡಲಾರೆ. ಖಂಡಿತವಾಗಿಯೂ ಪ್ರೀತಿಸುತ್ತೇನೆ.
ಕಷ್ಟಗಳಿದ್ದರೆ ದೂರ ತಳ್ಳುವುದಿಲ್ಲ. ಅರಮನೆಯಲ್ಲಿ ಮೆರೆಸುತ್ತೇನೆ ಎಂಬ ಕನಸು ಕಟ್ಟಿಸಲಾರೆ. ನೆಮ್ಮದಿಯ ಬದುಕಿಗೆ ಸಾಕಾಗುವಷ್ಟು ದುಡಿಯಬಲ್ಲೆ. ಕೊನೆಯವರೆಗೂ ಜೊತೆಯಾಗುವಿಯಾದರೆ ಕೈಹಿಡಿದು ಸಾಗುತ್ತೇನೆ. ಇಲ್ಲವಾದರೆ ದೂರದಿಂದಲೇ ಹೊರಟು ಬಿಡು. ಕಣ್ಣೀರು ಒರೆಸುವ ಕೈಯಾಗುತ್ತೇನೆ.”
ಇದು ಗಣೇಶನ ಡೈರಿಯ ಮುಖಪುಟದಲ್ಲಿರುವ ಸಾಲುಗಳು. ಅಲ್ಲಿಂದಾಚೆಗೆ ಏನೂ ತುಂಬಿಲ್ಲ. ಹಳೆಯ ಡೈರಿಯೂ ನನಗೆ ಸಿಕ್ಕಿಲ್ಲ. ಮುಂದಿನ ಪುಟಗಳನ್ನ ತುಂಬಿಸುವವಳಿಗೆ ಆತ ಕಾಯುತ್ತಿದ್ದಾನೆ ಎನಿಸುತ್ತದೆ. ತುಂಬಾ ತಾಳ್ಮೆಯಿಂದ, ಹೆಚ್ಚಾಗಿ ಪ್ರೀತಿಯಿಂದ…..
ಧೀರಜ್ ಬೆಳ್ಳಾರೆ