Connect with us

LATEST NEWS

ದಿನಕ್ಕೊಂದು ಕಥೆ- ದಿನ

ದಿನ

ನಾನು ಹೊರಟಿದ್ದೆ .ಅವನ ಬಳಿ ತಲುಪಲು ಹನ್ನೊಂದು ದಿನಗಳ ಕಾಲಾವಕಾಶ .ಬಾಗಿಲು ತೆರೆದಿರಲಿಲ್ಲ .ಒಳಗೆ ಹೋಗಲು ಒಂದಷ್ಟು ಪ್ರಶ್ನೋತ್ತರಗಳು ಸರಿ-ತಪ್ಪುಗಳ ಲೆಕ್ಕಾಚಾರಗಳು ಮುಗಿದಮೇಲೆ ಪ್ರವೇಶವಿತ್ತು .ಹಾಗಾಗಿ ಇನ್ನೂ ನನ್ನೂರಲ್ಲಿ ಸುತ್ತಾಡುತ್ತಿದ್ದೆ.

ನನಗೆ ಗೊತ್ತಿತ್ತು ನನ್ನ ಮರಣ ಹಲವು ಆಘಾತಗಳನ್ನು ಸೃಷ್ಟಿಸುತ್ತೆ ,ಕಣ್ಣೀರಧಾರೆ ಗಳಿಸುತ್ತೆ, ಸಂತಾಪ ಸೂಚಕ ಸಭೆ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ವರದಿ, ಮತ್ತೆ 11ನೇ ದಿನಕ್ಕೆ ಒಂದಷ್ಟು ಸಿಹಿ, ನನ್ನ ಅಂದವಾದ ಭಾವಚಿತ್ರಕ್ಕೆ ಗಂಧದ ಮಾಲೆ ,ಗಂಗಾನದಿಯಲ್ಲಿ ಬೂದಿಯ ಮಿಶ್ರಣ.

ಆದರೆ ಅದ್ಯಾವುದೂ ಘಟಿಸಲಿಲ್ಲ .ನಾನು ಅಂದುಕೊಂಡ ನನ್ನವರು ಯಾರು ಬಂದಿಲ್ಲ ನನ್ನ ಮುಖ ನೋಡೋಕೆ .ನಾನು ಅನಗತ್ಯ ವ್ಯಕ್ತಿಗಳು ಅಂದವರೇ ಹೆಗಲು ಕೊಟ್ಟಿದ್ದಾರೆ. ಮನೆಯಿಂದ ಹೊರಟಾಗ ಹಲವರು, ಮಸಣಕ್ಕೆ ತಲುಪುವಾಗ ಕೆಲವರಾದರೂ. ಚಿತೆಗೆ ಬೆಂಕಿ ಬಿದ್ದ ಕೂಡಲೇ ಮಾಯವಾದರೂ.

ಎಲ್ಲವನ್ನೂ ಹಂಚಿಕೊಂಡ ಅವರಿಗೆ ನಾನು ಮೈಲಿಗೆಯಾಗಿದ್ದೆ. ನಾ ಬಯಸಿದ ಅಳುವಿನ ಶಬ್ದವಾಗಲಿ, ನೋವಿನ ನುಡಿಗಳಾಗಲಿ ಎಲ್ಲೂ ಇಲ್ಲ. ನಾನು ದುಃಖದಿಂದ ಹಸಿವು ಇರಲಿಕ್ಕಿಲ್ಲ ಅಂದುಕೊಂಡವರು ಮಸಾಲದೋಸೆ ಸವಿಯುತ್ತಿದ್ದರು .ಅವರ ಕಷ್ಟಕಾಲದಲ್ಲಿ ಸಹಾಯ ಪಡೆದವರು ಮಸಣದ ಗೋಡೆಯೊಳಗೆ ಇಣುಕಿ ಮೊಬೈಲ್ನಲ್ಲಿ ಭಾವಚಿತ್ರವೊಂದನ್ನು ಅಳುವಿನ ಸಂಕೇತದೊಂದಿಗೆ ಹಾಕಿ ಮುಂದುವರೆದರು.

ಮೊದಲ ಪುಟದಲ್ಲಿ ಬರುತ್ತೇನೆಂದು ಕೊಂಡಿದ್ದ ಪತ್ರಿಕೆಯಲ್ಲಿ ಯಾವುದೋ ಒಂದು ಮೂಲೆಯಲ್ಲಿ ಸಣ್ಣ ಚಿತ್ರದೊಂದಿಗೆ ಇಡೀ ಕುಟುಂಬಸ್ಥರ ಹೆಸರು ದಾಖಲಾಗಿತ್ತು ಆದರೆ ಅವರ್ಯಾರು ನನ್ನ ಮುಖ ನೋಡೊಕು ಬಂದವರಲ್ಲ. ಬೂದಿ ಯಾವುದೋ ನದಿಯಲ್ಲಿ ಕರಗಿತು. ಯಾವುದಾದರೇನು ನೀರಲ್ಲವೆ?.

ಆಹಾ ನಾನೇನು ಸಂಪಾದಿಸಿದ್ದೇನೆ .ನಾಲ್ಕು ಕಣ್ಣೀರಹನಿಗಳನ್ನ? ಇಲ್ಲ .ಅದೂ ಇಲ್ಲ. ಆಗಲೇ ನನ್ನ ಭಾವಚಿತ್ರದ ಮೇಲೆ ಜೇಡ ಬಲೆ ಕಟ್ಟಲು ಶುರು ಮಾಡಿದೆ. ಅಲ್ಲಿ ಸರಿ ತಪ್ಪುಗಳ ಪರೀಕ್ಷೆಗೆ ಸರತಿ ಸಾಲಿನಲ್ಲಿ ನಿಂತಿದ್ದೇನೆ. ಯಾರೋ ತಳ್ಳುತ್ತಿದ್ದಾರೆ? ಮುಂದಕ್ಕೆ ಹೋಗೋ……

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *