LATEST NEWS
ದಿನಕ್ಕೊಂದು ಕಥೆ- ಸುಸ್ತಾಗಲ್ವಾ?

ಸುಸ್ತಾಗಲ್ವಾ?
ಇವತ್ತು ಬಿಸಿಲು ಜಾಸ್ತಿಯಾಗಿದೆಯೋ ಏನೋ ಗೊತ್ತಿಲ್ಲ. ಲಾಕ್ಡೌನ್ ಅಂತ ಅಮ್ಮ ಎರಡು ಕಟ್ಟಿಗೆ ತುಂಡುಗಳನ್ನು ಸೀಳಿ ಕೊಟ್ಟಿಗೆ ಒಳಗಡೆ ಇಡು ಅಂದ್ರು. ಒಂದು ಮುಗಿಯುವಾಗಲೇ ಬೆವರು ಬೇಡ ಬೇಡ ಅಂತ ಕಿರುಚುತ್ತಾ ದೇಹದಿಂದ ಹೊರಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ.
ಎರಡನೇ ಕಟ್ಟಿಗೆ ಮುಗಿಯುವಾಗ ನಾಲ್ಕು ಲೀಟರ್ ನೀರು, ಎರಡು ಪ್ಲೇಟ್ ದೋಸೆ, 2 ಗಂಟೆವಿಶ್ರಾಂತಿಯು ಆಗಿಹೋಯಿತು. ಮಧ್ಯಾಹ್ನ ಸುಸ್ತಿಗೆ ಗೋಡೆಗೆ ತಲೆ ಒರಗಿಸಿದ್ದೆ. ಅಮ್ಮ ಕೊಟ್ಟಿಗೆಯಲ್ಲಿ ದನ ತೊಳಿತಾ ಇದ್ರು. ಸ್ವಲ್ಲಪ ನಿದ್ದೆ ಮಾಡಿ ಏಳುವಾಗ ಹೋ ಗಿಡದ ಬುಡ ಬಿಡಿಸ್ತಾ ಇದ್ರು. ಆಮೇಲೆ ಹುಲ್ಲು ತಂದ್ರು, ಇನ್ನೊಂದೆರಡು ಕಟ್ಟಿಗೆ ಒಡೆದರು, ಅಂಗಳ ಗುಡಿಸಿದರು, ಬಟ್ಟೆ ಒಗೆದ್ರು ,ಅಡುಗೆ ಮಾಡಿದರು, ಪಾತ್ರೆ ತೊಳೆದು ಹಾಲು ಕರೆದು ಡಿಪೋಗೆ ನಡೆದುಕೊಂಡು ಹೋಗಿ ಕೊಟ್ಟು ಬಂದರು, ಅಂಗಳದ ಹುಲ್ಲು ಕಿತ್ರು, ಅಡಿಕೆ ಹೆಕ್ಕಿದ್ರು, ತರಕಾರಿ ಸಾಲು ಮಾಡಿದ್ರು, ಗದ್ದೆಗೆ ನೀರು ಕಟ್ಟಿದರು, ಸಮಯ ಸಿಕ್ಕಾಗ ಊಟ-ತಿಂಡಿ. ಎಲ್ಲರಿಗೂ ಊಟ ಬಡಿಸುತ್ತಿದ್ದರು. ವಿಶೇಷ ದಿನಕ್ಕೆ ವಿಶೇಷವನ್ನೆ ಮಾಡ್ತಿದ್ರು.

ಇಷ್ಟೆಲ್ಲ ಮಾಡಿದರೂ ಅಮ್ಮನಿಗೆ ಸುಸ್ತಾಗ್ತ ಇರಲಿಲ್ಲವಾ?. ಅವ್ರು ಸಾಕಪ್ಪ ಅಂತ ಕೂತಿಲ್ಲ, ಒಂದು ಐದು ನಿಮಿಷ ಜಾಸ್ತಿ ಮಲಗಿಲ್ಲ ?,ತಡವಾಗಿ ಮಲಗೋದು ಬೇಗ ಏಳೋದು!. ಅಮ್ಮನಿಗೆ ನಿಜವಾಗ್ಲೂ ಸುಸ್ತಾಗ್ತ ಇರಲಿಲ್ಲವಾ?. ಅವರಿಗೆ ಜ್ವರ, ಶೀತ, ತಲೆನೋವು, ಕಾಲುನೋವು, ಯಾವುದು ಬಂದೇ ಇಲ್ವಾ ?ಒಮ್ಮೆ ಹೇಳಮ್ಮ ನಿನಗೆ ಸುಸ್ತಾಗಲ್ವಾ?
ಜವಬ್ದಾರಿ ಮುಂದೆ ಸುಸ್ತು ಇರಲ್ಲಾ ಅಂತ ಕಾಣುತ್ತೆ.ನೀನೆ ಹೇಳಮ್ಮ ನಿಂಗೆ ಸುಸ್ತಾಗಲ್ವಾ?
ಧೀರಜ್ ಬೆಳ್ಳಾರೆ