LATEST NEWS
ದಿನಕ್ಕೊಂದು ಕಥೆ- ಪ್ರೇಮಿಗಳಲ್ಲವಂತೆ

ಪ್ರೇಮಿಗಳಲ್ಲವಂತೆ
ಸಾರಿ ಸಾರಿ ತಪ್ಪಾಯ್ತು. ನಿಮ್ಮಲ್ಲಿ ಕ್ಷಮೆ ಕೇಳಿ ಬದಲಾವಣೆ ಆಗೋವರೆಗೂ ನನ್ನನ್ನು ಅವನು ಬಿಡುತ್ತಿಲ್ಲ .ಇಡೀ ದಿನ ಅವನ ಮಾತಿನ ಮುಂದೆ ನಾನು ಮೌನವಾಗಿ ಬಿಟ್ಟೆ. ಆ ವಿಷಯ ಯಾವುದು ಅಂತನಾ! ನಿನ್ನೆ ನಾನು ಕೋಳಿಯ ಪ್ರೇಮಕಥೆ ಹೇಳಿದ್ನಲ್ಲ ಅದನ್ನ ಯಾರು ನಮ್ಮನೆ ಕೋಳಿಗೆ ಭಾಷಾಂತರ ಮಾಡಿ ವಿವರಿಸಿದ್ದಾರೆ.
ಈ ಕೋಳಿ ಬೆಳಗ್ಗೆನೇ ಬಂದು ನನ್ನ ಕಾಲರ್ ಹಿಡಿದು ಜಗಳ ಆರಂಭ ಮಾಡಿಬಿಟ್ಟಿತ್ತು.” ಹಲೋ ಬಾರಿ ದೊಡ್ಡ ಬರಹಗಾರರೇ? ನಿನಗೆ ಮರ್ಯಾದೆ ಬೇರೆ ಕೇಡು. ನಿನಗೆ ಯಾರು ಹೇಳಿದ್ದು ನಾನು ಮತ್ತು ಅವಳು ಪ್ರೇಮಿಗಳು ಅಂತ .ನಾನೇನಾದ್ರೂ ಸರ್ಟಿಫಿಕೇಟ್ ತಂದಿದ್ನಾ. ನಾವಿಬ್ರೂ ಆತ್ಮೀಯ ಸ್ನೇಹಿತರು.

ಇಬ್ಬರೂ ಓಡಾಡುತ್ತಿದ್ದೇವೆ. ಅದಕ್ಕೆ ಕಥೆ ಕಟ್ಟಿ ಬಿಡೋದಾ? ಅದನ್ನೇ ಪ್ರೀತಿ ಅಂತ ಬಣ್ಣಿಸೋದಾ? ಅವಳನ್ನ ಕೇರ್ ಮಾಡ್ತಾನೆ? ನಿನಗೇನು ಪ್ರಾಬ್ಲಮ್ಮು .ಅದಕ್ಕೆ ಪ್ರೀತಿ ಮಾಡಲೇ ಬೇಕಾ? ಅದೇನು ಸರಸ-ಸಲ್ಲಾಪ ಅಂತ ಬರೆದಿದ್ದೀಯಾ. ನೀನೇನು ಬಂದು ನೋಡಿದ್ದೀಯಾ. ಅವಳಿಲ್ಲ ಬಿಡು.
ನನ್ನ ಇಮೇಜ್ ಏನಾಗಬಹುದು ?ಕೆಲವರು ಹೆಣ್ಣು ಕೋಳಿಗಳು ನನಗೋಸ್ಕರ ಕಾಯುತ್ತಿವೆ. ನಾನು ಒಂದೆರಡಕ್ಕೆ ಪ್ರಯತ್ನಪಡ್ತಾ ಇರುವಾಗ ನಿನ್ನ ಈ ಬರವಣಿಗೆ ಅವುಗಳಿಗೆ ಯಾರಾದ್ರೂ ಭಾಷಾಂತರ ಮಾಡಿ ಹೇಳಿದರೆ ನನ್ನ ಜೀವನ ಏನಾಗಬಹುದು? ಅದು ಅಲ್ದೇ ಮೇಲಿನ ಮನೆಯ ರಮೇಶಣ್ಣನ ಹೇಂಟೆಗೆ ಇವತ್ತು ಪ್ರಪೋಸ್ ಮಾಡಬೇಕು ಅಂತ ಹೊರಟಿದೆ. ಈ ಸುದ್ದಿ ಅವಳಿಗೆ ಭಾಷಾಂತರ ಯಾರು ಮಾಡಿದರೋ ಗೊತ್ತಿಲ್ಲ.
ನಿನ್ನೆವರೆಗೂ ನನ್ನ ಹಿಂದೆ ಬರ್ತಿದ್ದವಳು, ಈಗ ಓಡುತ್ತಿದ್ದಾಳೆ. ನಾನು ನೋವಲ್ಲಿದ್ದೆ. ಒಂದು ಗೆಳತಿ ಇಲ್ಲ ಅಂತ, ಇನ್ನೊಂದು ನಂಗೆ ಹೊಟ್ಟೆ ನೋವು. ಅದು ನಿನಗೆ ಕಾಣಿಸ್ತಾ ಇಲ್ವಲ್ಲಾ? ಕಥೆಗಾರ ನೀನು ಏನಾದರೂ ಕಲ್ಪನೆ ಕಲ್ಪಿಸಿಕೊಳ್ಳುವುದಾ ಸ್ವಲ್ಪ ತಿಳ್ಕೊಂಡು ಬರಿ. ಅವಳತ್ರ ನಾನು ಮಾತನಾಡಿ ಸರಿ ಮಾಡಿಕೊಳ್ಳುತ್ತೇನೆ. ಇನ್ನಾದರೂ ಇರೋದನ್ನ ಕೇಳಿ ಕಥೆ ಬರಬೇಕು. ಹೀಗೆಂದು ನಡೆದುಬಿಟ್ಟ…… ”
ಪ್ರೇಮಿಗಳು ಅಲ್ಲ ಅಂತೆ ಅವರು ,ಅಯ್ತಾ? ಕೋಳಿಯಿಂದಲೂ ನನಗೆ ಪ್ರವಚನ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಇನ್ನುಮುಂದೆ ಸಂಬಂಧಗಳನ್ನು ಜೋಡಿಸುವಾಗ ತಿಳಿದು ಜೋಡಿಸುತ್ತೇನೆ .ಅಬ್ಬ ಈಗ ಸಮಾಧಾನ ಆಯ್ತು….
ಧೀರಜ್ ಬೆಳ್ಳಾರೆ