LATEST NEWS
ದಿನಕ್ಕೊಂದು ಕಥೆ- ಪ್ರಾರ್ಥನೆ
ಪ್ರಾರ್ಥನೆ
ನಮ್ಮದು 22ನೇ ಮಹಡಿ .ಅಲ್ಲಿನ ಕಿಟಕಿಯಿಂದ ಇಣುಕಿದರೆ ಕಾಣೋದು ದೊಡ್ಡ ಮೈದಾನ. ಇನ್ನೊಂದು ಕಡೆ ಕಟ್ಟಡಗಳ ಸಾಲು .ಇಷ್ಟು ದಿನ ಆ ಮೈದಾನದಲ್ಲಿ ಒಂದೆರಡು ದನಗಳನ್ನು ಅಡ್ಡಾಡುವುದು ಬಿಟ್ಟರೆ ಬೇರೇನೂ ಕಂಡಿಲ್ಲ ನನಗೆ. ಆದರೆ ಕೆಲವು ದಿನದಿಂದ ಗಾಡಿಗಳ ಸಾಲುಗಳು ಹೆಚ್ಚುತ್ತಿವೆ.
ಕಟ್ಟಿಗೆಗಳನ್ನು ಒಟ್ಟುಸೇರಿಸಿ ಬೆಂಕಿ ಹಾಕುತ್ತಿದ್ದಾರೆ. ದಿನ 3 ದಾಟಿದರೂ ಬೆಂಕಿ ಆರುತ್ತಿಲ್ಲ. ಮತ್ತೆ ಮತ್ತೆ ಉರಿತಾನೆ ಇದೆ. ಅಂಬುಲೆನ್ಸ್ ಸದ್ದು ಹೆಚ್ಚಾಗ್ತಾ ಇದೆ. ಎಲ್ಲವೂ ಬೆಂಕಿ ಒಂದೇ ತರ,ಬೂದಿನೂ ಸಹ. ಅಳಿದುಳಿದ ಕಟ್ಟಿಗೆಗಳನ್ನು ಮತ್ತೆ ಸೇರಿಸಿ ಮತ್ತೆ ಬೆಂಕಿ ಹಚ್ಚುತ್ತಿದ್ದಾರೆ. ಅಮ್ಮ ಆಸ್ಪತ್ರೆಗೆ ತೆರಳಿದವರು ಒಂದು ವಾರವಾದರೂ ಮನೆಗೆ ಬಂದಿಲ್ಲ. ಅಪ್ಪ ಮತ್ತು ನಾನು ಮಾತ್ರ ಇರೋದು.
ಅದೇನು ಕಾಯಿಲೆಯಂತೆ ಅಮ್ಮ ಡಾಕ್ಟರ್ ಅಲ್ವಾ? ಅಲ್ಲಿ ಊಟ, ನಿದ್ದೆ ಮಾಡಿದ್ರಾ ಗೊತ್ತಾಗಲ್ಲ. ರಾತ್ರಿ ಒಮ್ಮೆ ಫೋನಾಯಿಸಿ ಜಾಗ್ರತೆ ಮಗಾ ಅಂತಾರೆ. ಟಿವಿಯಲ್ಲಿ ಯಾರು ಮನೆಯಿಂದ ಹೊರಗೆ ಬರಬೇಡಿ ಅಪಾಯ ಅಂತಾರೆ, ಅದೇ ಟಿವಿಯಲ್ಲಿ ರಾಶಿ ಜನ ಅಂಗಡಿ ಮುಂದೆ ನಿಂತಿರುವುದನ್ನು ತೋರಿಸುತ್ತಾರೆ.
ಯಾರಿಗೂ ಬುದ್ಧಿ ಹೇಳಬೇಕು. ದೇವರೇ, ಅಮ್ಮ ಈ ವಾರನಾದ್ರೂ ಮನೆಗೆ ಬರ್ತಾರೆ ಅಲ್ವಾ?. ಬೇಗ ಹುಷಾರ್ ಮಾಡು ಎಲ್ಲರನ್ನು. ಅಮ್ಮನ ತೊಡೆ ಮೇಲೆ ಮಲಗಬೇಕು ಅವರ ಲಾಲಿಹಾಡು ಕೇಳಬೇಕು ಅಂತ ಆಸೆ. ನೀನು ನನ್ನ ಪ್ರಾರ್ಥನೆ ಕೇಳ್ತಿಯ ಅಲ್ವಾ .”
ಪ್ರಾರ್ಥನೆಗಳು ಎಲ್ಲವೂ ಮೇಲೇರುತ್ತಿವೆ .ಆದರೆ ಅವನು ಏನನ್ನ ತೀರ್ಮಾನಿಸಿದ್ದಾನೋ ಗೊತ್ತಿಲ್ಲ.
ಕೈ ಮುಗಿದಿದ್ದೇವೆ ,ಶರಣಾಗಿದ್ದೇವೆ…
ಬದುಕೋ… ಮಸಣವೊ… ಗೊತ್ತಿಲ್ಲ …
ಧೀರಜ್ ಬೆಳ್ಳಾರೆ