LATEST NEWS
ದಿನಕ್ಕೊಂದು ಕಥೆ- ಭಯ
ಭಯ
ಆಗಸದಲ್ಲಿ ರೇಖೆಗಳ ಚಿತ್ತಾರ ಭಯದ ಸಂತೋಷವನ್ನು ಉಂಟು ಮಾಡಿದರೆ, ಗುಡುಗಿನ ನಾದನ ಎದೆಯೊಳಗೆ ತಣ್ಣಗೆ ನಡುಕವನ್ನು ಹುಟ್ಟಿಸುತ್ತಿತ್ತು .ಆದರೆ ಈ ಭಯ ನಮ್ಮ ಮನೆಯ ಶಂಕರಿಗೆ ಉಂಟಾಗಲಿಲ್ಲ. ಉಳಿದ ದನಗಳು ಭಯದಿಂದ ಮೂಲೆಗೊತ್ತಿ ನಿಂತಿವೆ.
ಜಿಮ್ಮಿ ಬಾಗಿಲ ಸಂದಿಯಲ್ಲಿದೆ, ನಾವು ಮನೆಯೊಳಗೆ ಸೇರಿದ್ದೇವೆ .ಆದರೆ ಶಂಕರಿ ಆರಾಮವಾಗಿ ಹುಲ್ಲು ತಿನ್ನುತ್ತಿದ್ದಾಳೆ. ನನಗೆ ಕುತೂಹಲ ಹೆಚ್ಚಾಗಿ ಗಮನಿಸುತ್ತಲೇ ಇದ್ದೆ. ಇವಳು ಪ್ರತಿದಿನ ಬೆಳಗ್ಗೆ ಎಂಟು ಮೂವತ್ತಕ್ಕೆ ಮತ್ತೆ ಸಂಜೆ ಆರರಿಂದ ಎಂಟರ ಒಳಗೆ ವಿಚಿತ್ರವಾದ ಭಯವನ್ನು ಪಡುತ್ತಾ ಜೋರಾಗಿ ಕೂಗುತ್ತಾಳೆ. ಕಾಲುಗಳು ಒಂದೆಡೆ ನಿಲ್ಲುವುದಿಲ್ಲ. ಕಣ್ಣುಗಳು ದೀನತೆಯಿಂದ ನೀರು ತುಂಬಿಕೊಂಡು ಬೇಡುವಂತೆ ಕಾಣುತ್ತಾಳೆ. ಕಾರಣ ತಿಳಿಯುತ್ತಿಲ್ಲ.
ಮತ್ತೆ ಹೊರಗೆ ಗಮನಿಸಿದಾಗ ಆ ಸಮಯಕ್ಕೆ ಸರಿಯಾಗಿ ಕೆಳಗಿನ ಮನೆಯ ಶರೀಪ್ ಅಣ್ಣನ ಪಿಕಪ್ ಗಾಡಿ ಪೇಟೆಗೆ ಹೋಗುತ್ತಿತ್ತು. ಸಂಜೆ ಹಿಂತಿರುಗುತ್ತಿತ್ತು. ಈನ ಶಬ್ದ ಶಂಕರಿಯಲ್ಲಿ ಬದಲಾವಣೆಯನ್ನು ತೋರಿಸುತ್ತಿತ್ತು. ಇದಕ್ಕೆ ಕಾರಣ ತಿಳಿಯೋಕೆ ಅವಳ ಜನ್ಮಸ್ಥಳ ಮಂಡೆಕೋಲಿನ ಭಟ್ಟರಿಗೆ ಫೋನಾಯಿಸಿದಾಗ ತಿಳಿಯಿತು.
ಹುಟ್ಟಿದ ಕೆಲವೇ ದಿನಗಳಲ್ಲಿ ಅವಳನ್ನು ಕೊಟ್ಟಿಗೆಯಿಂದ ಪಿಕಪ್ ಗಾಡಿಯಲ್ಲಿ ಕದ್ದೊಯ್ದಿದ್ದರು, ಅಲ್ಲಿಂದ ತಪ್ಪಿಸಿಕೊಂಡು ಆಕೆಯನ್ನು ಇನ್ಯಾರು ಎಳೆದೊಯ್ದಿದ್ದರು ಹಿಂಸೆ ಅನುಭವಿಸಿ ಹಿಂತಿರುಗಿದ್ದಳು. ಅ ಭಯ, ಗಾಡಿಯ ಶಬ್ದ ಅವಳ ಕಿವಿಯೊಳಗೆ ಮನದ ಒಳಗೆ ಅಚ್ಚೊತ್ತಿ ನಿಂತುಬಿಟ್ಟಿತ್ತು. ಕೊಟ್ಟಿಗೆಯ ಗೋಡೆಯನ್ನು ಏರಿಸಿದೆ. ಶಬ್ದ ಕಡಿಮೆಯಾಯಿತು ಅವಳಲ್ಲಿದ್ದ ಭಯವೂ ಕೂಡ. ಈಗ ಹುಲ್ಲು ತಿನ್ನುತ್ತಿದ್ದಾಳೆ. ಶಂಕರಿಯ ಕಣ್ಣಲ್ಲಿ ನೆಮ್ಮದಿ ಇದೆ. ಸದ್ಯಕ್ಕಷ್ಟೇ ಸಾಕಲ್ಲವೇ….
ಧೀರಜ್ ಬೆಳ್ಳಾರೆ