LATEST NEWS
ದಿನಕ್ಕೊಂದು ಕಥೆ- ಬೇಡಿಕೆ
ಬೇಡಿಕೆ
“ನೆಲದಲ್ಲಿ ಕಾಲು ಇಡೋಕೆ ಆಗ್ತಿಲ್ಲ, ಕೋಣೆಯೊಳಗೆ ಕೂರಲಾಗುತ್ತಿಲ್ಲ ಒಮ್ಮೆ ಮಳೆ ಬರಬಾರದಾ?”
“ಈಗಲೇ ತುಂಬಾ ಸೆಕೆ ಇದೆ. ಮಳೆ ಬಂದರೆ ಜಾಸ್ತಿ ಆಗುತ್ತೆ ಸೆಕೆ, ಮತ್ತೆ ಹೇಗಿರುತ್ತೋ? ಅದನ್ನು ಹೇಗೆ ತಡೆದುಕೊಳ್ಳುವುದು”
“ಇವತ್ತು ಮಳೆ ಬಂದರೆ ನಾಳೆ ಭಟ್ಟರ ತೋಟದಲ್ಲಿ ಅಡಿಕೆ ತೆಗೆಯೋಕೆ ಆಗಲ್ಲ, ಮರ ಜಾರುತ್ತೆ.ಬಿಸಿಲು ಹೀಗೆ ಇರಲಿ”
“ಆಕಾಶದಿಂದ ಒಮ್ಮೆ ಮಳೆ ಬರಲಪ್ಪ .ಗದ್ದೆಗೆ ನೀರಿಲ್ಲ.”
“ಮಳೇ ಬರುವಂತಿದೆ .ಮಗಳದ್ದು ಮದುವೆ ಗೊತ್ತಾಗಿದೆ. ಇಡೀ ಕಾರ್ಯಕ್ರಮ ಹಾಳಾಗುತ್ತೆ.ಬರದಿರಲಿ ಮಳೆ.”
“ಮಳೆ ಬಂದರೆ ಹಾಕಿದ ಸಂಡಿಗೆ ಹಾಳಾಗುತ್ತೆ ,ಬರಬೇಡ ಮಾರಾಯ”
“ಮಳೆ ಬರದಿದ್ದರೆ ನನ್ನಂಗಡಿ ಛತ್ರಿಗಳು ಮಾರಾಟವಾಗುವುದು ಹೇಗೆ ?”
” ನಮ್ಮನೆ ಬಾವಿ ನೀರು ಕೆಳಗಿಳಿತಾ ಇದೆ ,ಮಳೆ ಬರಲಿ ಭಗವಂತ”
“ಮಳೆ ಒಂದು ಬೇಡಪ್ಪ ,ಒಗೆದು ಹಾಕಿರೋ ಬಟ್ಟೆ ಒದ್ದೆಯಾದರೆ, ಮತ್ತೆ ಒಗೆಯೋದು ಯಾವಾಗ?”
“ಮಳೆ ಒಂದು ಬೇಡಪ್ಪ !,ರಸ್ತೆಗೆ ಹಾಕಿದ ಮಣ್ಣು ಕೊಚ್ಚಿ ಹೋಗುತ್ತೆ”
” ಮಳೆ ಚೂರು ಜೋರಾಗಿ ಬಂದರೆ ಅಂಗಳ ಸ್ವಲ್ಪ ಗಟ್ಟಿಯಾಗುತ್ತದೆ”
” ಮಳೆ ನೋಡದೆ ತುಂಬಾ ದಿನ ಆಯ್ತು ,ಅದರ ಜೊತೆ ಒಂದು ಟೀ ಸವಿಬೇಕಿತ್ತು”
“ಈ ಮಳೆ ಬಂದರೆ ,ಶೀತಜ್ವರಗಳನ್ನು ಹೊತ್ತು ತರುತ್ತೆ ”
ಒಮ್ಮೆ ಮಳೆ ಬಂದಿದ್ರೆ ಊರು ಸ್ವಲ್ಪ ಸ್ವಚ್ಛತೆ ಆಗುತ್ತಿತ್ತು”.
” ಮಳೆಯಿಂದ ಎಲ್ಲ ಕಸಕಡ್ಡಿಗಳು ಅಂಗಳಕ್ಕೆ ಬರುತ್ತೆ”
ಕಾರಣವೊಂದೇ ಎಲ್ಲದಕ್ಕೂ ಬೇಡಿಕೆಗಳಿಗೆ. ಪಟ್ಟಿ ಬೆಳೆಯುತ್ತದೆ. ಮಳೆರಾಯನ ಅನುಗ್ರಹ ಯಾವ ಕಡೆಗೂ ?ಉತ್ತರವಿಲ್ಲದ ಪ್ರಶ್ನೆಗಳು. ಬೇಡುವ ಮುನ್ನ ನಾನೀ ನೆಲಕ್ಕೆ ದ್ರೋಹ ಮಾಡಿದ್ದೇನಾ ಎಂಬ ಪ್ರಶ್ನೆ ಇದ್ದರೆ ಪ್ರಾರ್ಥನೆಗೆ ಫಲ ಸಿಗಬಹುದೇನೋ……
ಧೀರಜ್ ಬೆಳ್ಳಾರೆ