LATEST NEWS
ದಿನಕ್ಕೊಂದು ಕಥೆ- ಪತ್ರವೊಂದು

ಪತ್ರವೊಂದು
ನನ್ನವಳೇ ,ತುಂಬಾ ಕಾಯಿಸಬೇಡ. ವಿಪರೀತ ಕಾಡಿಸಬೇಡ. ಕಣ್ಣೋಟದ ಮೊದಲ ಸಿಂಚನ ನನ್ನೆದೆಗೆ ಬಿಟ್ಟು ಅದು ಪ್ರೀತಿಯ ಮೊಳಕೆಯೊಡೆದು ಮರವಾಗಿದೆ. ಆ ದಿನ ಮರೆಯಾದ ಜೀವ ಆಗಾಗ ಫೋನಾಯಿಸಿದೆ ವಿನಃ ಮುಖತಃ ಭೇಟಿ ಇಲ್ಲ. ಬಂದು ಮಾತನಾಡಬಾರದೇ ಮುದ್ದು, ನನ್ನೂರಿಗೆ ಬರುವ ಕಾಲವನ್ನು ಒಮ್ಮೆ ತಿಳಿಸು, ಬೇಸಿಗೆ ಕಾಲ ವಿಪರೀತ ಬಿಸಿ ನಿನ್ನ ಮುಖಾರವಿಂದ ಬಾಡುವುದು, ಕೋಮಲ ಪಾದ ಸುಡುವುದು.
ಮಳೆ ಹೆಚ್ಚಾಗಿದ್ದರೆ ತಂಪಿನ ಗಾಳಿ ನಿನ್ನ ಉಸಿರಿಗೆ ಜ್ವರವನ್ನೇ ದತ್ತು ನೀಡಬಹುದು. ಹೂವರಳದ ದಿನ ಇತ್ತ ಕಾಲಿಡಬೇಡ, ನಿನ್ನ ಕೈಗಿಡುವ ಸುವಾಸನೆಯುಕ್ತ ಹೂವಿಲ್ಲದೆ ಅಂದ ಕುಗ್ಗಬಹುದು, ನಿನ್ನ ಮುಡಿಗುಡಿಸುವ ಮಲ್ಲಿಗೆ ಅರಳದಿರಬಹುದು, ನೆರಿಗೆಗಳನ್ನು ಹಾಕಿರುವ ಸೀರೆ ಧರಿಸಿ ಬಾ ಚಂದ್ರ ಚಕೋರಿ, ನಿನಗೆ ಒಂದಿನಿತೂ ತೊಂದರೆ ನೀಡದಂತೆ ಗಾಳಿಯನ್ನು ನಾ ಬೇಡುತ್ತೇನೆ.

ಆಕಾಶವು ನಕ್ಷತ್ರ ಚಂದ್ರರನ್ನ ಹೊದ್ದು ಮಲಗಿರುವಾಗ ಬರಬೇಡ, ಕತ್ತಲು ನಿನ್ನ ಅಂದವನ್ನು ಮರೆ ಮಾಚಬಹುದು. ನಿನ್ನಿಷ್ಟದ ಅಡುಗೆಯನ್ನು ಕೈಯಾರೆ ಉಣಬಡಿಸಿ ನಿನ್ನೊಂದಿಗೆ ಹರಟುವ ದಿನವನ್ನ ಮೊದಲೇ ತಿಳಿಸಿ ಬಂದುಬಿಡು ಗೆಳತಿ. ನಾವಿಬ್ಬರೂ ಜೊತೆಯಾಗಿ ಸಾಗಬೇಕಾದ ಜೀವನದ ನಾವೆಯನ್ನು ದಿಕ್ಕು ಬದಲಿಸದೆ ಸಾಗಿಸಬೇಕಿದೆ. ನಾವೆಯನ್ನು ಏರುತ್ತೀಯ ಎಂಬ ಆಶಾಭಾವನೆಯಲ್ಲಿರುವ ನಿನ್ನಂತರಂಗದ ಮೃದುವಾದ ಬಡಿತ
ನಿನ್ನ ಹುಡುಗ
ನಿನ್ನವನು ಮಾತ್ರ
ಧೀರಜ್ ಬೆಳ್ಳಾರೆ