LATEST NEWS
ದಿನಕ್ಕೊಂದು ಕಥೆ- ಪ್ರೀತಿ-ಸಾವು
ಪ್ರೀತಿ-ಸಾವು
“ಪ್ರೀತಿಗಿಂತ ದೊಡ್ಡದು ಇನ್ನೇನಿದೆ, ಅದುವೇ ಅಂತಿಮ ಸತ್ಯ ,ತಿಳಿಯೋ ನರಮಾನವ.” ನೇಗಿಲಪುರದ ಶಾಲೆಯ ಮೈದಾನದಲ್ಲಿ ಹರಿಕಥೆ ಮಾಸ್ತರರು ಪ್ರವಚನ ಮಾಡ್ತಾಯಿದ್ರು .ಈ ಸಾಲುಗಳನ್ನು ಕೇಳುವ ಕಿವಿಗಳು ತುಂಬಿದ್ದವು.ತರಂಗಗಳ ಚಲನೆ ಕಾಣದೆ ಇರೋ ಕಾರಣ ಎಲ್ಲರ ಮನದೊಳಗೆ ಅದು ಚಲಿಸಿದಿಯೋ, ಇಲ್ಲವೋ ಅನ್ನೋದು ಗೊತ್ತಾಗುತ್ತಿಲ್ಲ. ಹರಿಕಥೆಯ ಮಾತು ಕೇಳಿಸುವಷ್ಟು ದೂರದ ರಸ್ತೆಯಲ್ಲಿ ಒಂದು ಪ್ರಾಣಪಕ್ಷಿ ಹಾರಿಹೋಗಿತ್ತು. ಸಮಾಚಾರ ಹರಡುತ್ತಿದ್ದ ಗಾಳಿ ಮೌನವಾಯಿತು. ಮಾತು ಮರೆಗೆ ಸರಿಯಿತು .
ಪ್ರೀತಿಸಬೇಕೆಂಬ ಒತ್ತಾಯ ಒಂದು ಕಡೆ ಅದೇ ಕಾರಣಕ್ಕೆ ದಿನವೂ ಅವಳ ಹಿಂದೆ ಅವನ ಓಡಾಟ. ಅವಳಿಗೆ ಜವಾಬ್ದಾರಿಗಳು ಹೆಗಲಿಗೇರಿದ್ದವು. ಪ್ರೀತಿ ಮನೆಯವರ ಮೇಲೆ ಹೆಚ್ಚೇ ಇತ್ತು. ಒಂದಷ್ಟು ಕಾಟಗಳನ್ನು ನಯವಾಗಿ ತಿರಸ್ಕರಿಸಿದ್ದಳು. ಆದರೆ ಅವನಿಗೆ ಪ್ರೀತಿಯ ಅಮಲು ತಲೆಗೇರಿತ್ತು.
ನನಗೆ ಸಿಗದಿರುವುದು ಇನ್ನು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಬಲಗೈ ಹಿಡಿದ ಚೂರಿ ಅವಳ ದೇಹವನ್ನು ಬಲವಾಗಿ ಇರಿಯಿತು. ದಿನ ಕಾಯುವ ಕಾಯುವಿಕೆಯ ಸಿಟ್ಟನ್ನು ಚೂರಿ ಹಿಡಿದ ಕೈ ಸತತವಾಗಿ ದೇಹದೊಳಗೆ ನುಗ್ಗಿ ಹೊರಬರುತ್ತಾ ತೋರಿಸುತ್ತಿತ್ತು.
ಬದುಕುವ ಆಸೆಯ ಕಂಗಳ ಹುಡುಗಿ ನೋವಿನಲ್ಲಿ ಚೀತ್ಕರಿಸುವ ಮೊದಲೇ ಚೂರಿ ದೇಹದೊಳಗೆ ನುಗ್ಗಿ ಉಸಿರನ್ನ ನಿಲ್ಲಿಸಿತ್ತು. ತಪ್ಪಿಲ್ಲದ ಹುಡುಗಿ ಪ್ರೀತಿಗೆ ಬಲಿಯಾಗಿದ್ದಳು. ಧರಾಶಾಯಿಯಾಗಿದೆ ದೇಹ. ಬದುಕುವ ಆಸೆ ನೆತ್ತರಿನೊಂದಿಗೆ ಹರಿಯುತ್ತಿತ್ತು. ಹರಿಕಥೆ ಮಾಸ್ತರರ ಪ್ರೀತಿಯೇ ಪರಮ ಸತ್ಯ ಅನ್ನೋ ಕೊನೆಯ ಸಾಲು ಕೇಳುತ್ತಿತ್ತು. ಇಲ್ಲಿ …..ಸಾವು
ಧೀರಜ್ ಬೆಳ್ಳಾರೆ