LATEST NEWS
ದಿನಕ್ಕೊಂದು ಕಥೆ- ವಿಶೇಷ

ವಿಶೇಷ
ಮನೆ ಸಂಭ್ರಮಗೊಂಡಿದೆ . ಅದು ಪ್ರತಿವರ್ಷ ಯುಗಾದಿಗಾಗಿ ಕಾಯುತ್ತದೆ.ಹಿಂದೆ ಹಲವು ಸ್ವರಗಳು ಸಾವಿರ ಹೆಜ್ಜೆಗಳು ವಿನೋದ, ಜಗಳ ,ಸಹಬಾಳ್ವೆಯನ್ನು ಹೊಂದಿದ್ದ ಮನೆ ಇಂದು ಕೇವಲ ನಾಲ್ಕು ದನಿಗಳನ್ನು ಮಾತ್ರ ಕೇಳುತ್ತಿದೆ. ಯುಗಾದಿಗೆ ಹಸಿರು ಚಿಗುರುವಂತೆ ಮನೆಯೊಳಗೆ ಸಂತಸ ಮೇಲೆದ್ದು ನಿಲ್ಲುತ್ತದೆ.
ಇದು ಇಡೀ ವರ್ಷ ಉಳಿಯುವ ಸಂಭ್ರಮವಲ್ಲ ಒಂದೇ ದಿನದ್ದಾದರೂ ಅದೇ ಪುಣ್ಯವಲ್ಲವೇ?. ಮನೆಯ ಹತ್ತಿರ ಹೆಜ್ಜೆಗಳ ಸಪ್ತ ಳ ಹೆಚ್ಚಾಯಿತು. ಗಾಡಿಗಳು ಬಂದು ನಿಂತವು .ಮಾತುಕತೆ, ಗೌಜಿ ,ಗದ್ದಲ ತುಂಬಲಾರಂಭಿಸಿತು. ಹೊಸ ಸದಸ್ಯರು ಆಗಮಿಸಿದರು, ಮನೆ ನಗುತಲಿತ್ತು. ಈ ದಿನ ಆ ಕುಟುಂಬದ ದೈವಗಳಿಗೆ ಅಗೇಲು ಸೇವೆ.

ಹಿರಿಯರನ್ನು ನೆನೆಯುವ ಕಾರ್ಯಕ್ರಮ . ಬರಲೇಬೇಕು ಎಲ್ಲಾ!. ಇಂದು ಜೊತೆಯಾಗುವ ಅವರೆಲ್ಲಾ ಹಿಂದೂಮ್ಮೆ ಜಗಳ ಮಾಡಿ ಮನೆ ಬಿಟ್ಟವರು, ವೈರತ್ವ ಕಟ್ಟಿಕೊಂಡವರು, ಬೇರೆ ಮನೆ ಮಾಡಿದವರು, ಕೆಲಸಕ್ಕೆ ಓಡಿದವರು, ಮದುವೆಯಾಗಿ ಹೊರಟವರು, ಶಾಲೆಗೆ ಹೋಗುವ ಮಕ್ಕಳು, ಪ್ರೀತಿಸುವ ಅಜ್ಜ-ಅಜ್ಜಿ, ಎಲ್ಲಾ ಜೊತೆಯಾಗಿ ಕೈಮುಗಿಯುತ್ತಾರೆ.
ನೀಲಾಕಾಶದಲ್ಲಿ ಹರಸುವ ಹಿರಿಯರೊಂದಿಗೆ ಮನೆಯು ಸಂಭ್ರಮಿಸುತ್ತದೆ. ಯುಗಾದಿ ಆಗಾಗ ಬರಲೆಂದು ಮನೆ ಬೇಡುತ್ತದೆ. ಭಯದಿಂದಲಾದರೂ ಒಂದು ದಿನ ಪರಸ್ಪರ ಮುಖ ನೋಡಿಕೊಂಡು ಹೊರನಡೆಯುತ್ತಾರೆ. ಮತ್ತೆ ಮನೆ ಮೌನ ತಾಳುತ್ತದೆ. ಕಾಯುತ್ತದೆ ಮುಂದಿನ ಯುಗಾದಿಗೆ , ಮನೆಯವರ ಮನಸ್ಸು ಚಿಗುರಿ ಅಪ್ಪಿ ನಿಲ್ಲುವ ದಿನಕ್ಕೆ ಬೇಡುತ್ತಿದೆ.
ಧೀರಜ್ ಬೆಳ್ಳಾರೆ