LATEST NEWS
ದಿನಕ್ಕೊಂದು ಕಥೆ- ಮುಂದೇನು?

ಮುಂದೇನು?
ಇದ್ದ ಡಬ್ಬದಲ್ಲಿ, ಅಂಗಿಯ ಕಿಸೆಯಲ್ಲಿ ,ನೆಲದ ಮೂಲೆಯಲ್ಲಿ, ಎಲ್ಲಾ ಕಡೆ ಚಿಲ್ಲರೆಗಳಿಗೆ ಹುಡುಕಾಟ.ಈ ದಿನ ಮನೆ ಬಿಟ್ಟು ಹೊರಡಬೇಕು. ಅಪ್ಪನನ್ನು ಪೋಲಿಸ್ ಹುಡುಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಅಮ್ಮನಿಗೆ ಎರಡು ಹೆಂಗಸರು ಬಡಿಯುತ್ತಿದ್ದಾಗ ಅಪ್ಪ ಅವರನ್ನು ಬಿಡಿಸಲು ಇಬ್ಬರಿಗೆ ಕೋಲಿನಲ್ಲಿ ಹೊಡೆದರು.
ಇಲ್ಲಿ ಅಪ್ಪನದ್ದು ಧರ್ಮವಲ್ಲವೇ? ಅಮ್ಮ ಹೆಣ್ಣು ಎನ್ನುವುದಕ್ಕಿಂತ ಆ ಎರಡು ಹೆಣ್ಣುಗಳ ಮಾತಿಗೆ ಮರ್ಯಾದೆ ಹೆಚ್ಚಾಗಿ ಪೋಲಿಸ್ ಗಾಡಿಗಳು ಊರೊಳಗೆ ಹೊಕ್ಕವು. ಅಪ್ಪ ತಪ್ಪಿಸಿಕೊಳ್ಳೋಕೆ ತಲೆಮರೆಸಿ ನಮ್ಮಜ್ಜಿಯ ಊರಿಗೆ ಬಂದರು. ಹೆಂಗಸರ ಕಡೆಯ ಗಂಡಾಳುಗಳು ಕತ್ತಿ ದೊಣ್ಣೆ ಹಿಡಿದು ರಾತ್ರಿ ಹೊತ್ತು ಮನೆಯ ಸುತ್ತುವರೆದು ಕಿರುಚಾಡಿದರು. ಆಗಲೇ ಊರು ಬಿಡುವ ನಿರ್ಧಾರ ಬಲವಾಗಿತ್ತು.

ಅಮ್ಮ ತಂಗಿ ಮತ್ತು ನಾನು ಹೊರಟೆವು.ಗಾಡಿಗೆ ಕೊಡೋಕೆ ಹಣವಿಲ್ಲ. ಅಮ್ಮ ಒಮ್ಮೆ ಮತ್ತೆ ನೋಡದೇ ಇರುವ ಮನೆಯನ್ನ ನೋಡಿ ನಿಟ್ಟುಸಿರು ಚೆಲ್ಲಿ ಕಣ್ಣೀರು ಸುರಿಸುತ್ತಾ ಹೆಜ್ಜೆ ಹಾಕಿದರು. ಸಂಬಂಧಿಕರನ್ನು ವವರು ಕೈಚೆಲ್ಲಿ ಅಪರಿಚಿತರಾದರು. ಗಂಟುಮೂಟೆಗಳ ಹೊತ್ತು ಕಾಲ್ನಡಿಗೆಯ ಪಯಣ. ಹತ್ತೋ, ಇಪ್ಪತ್ತೋ, ಮೂವತ್ತೋ ಗೊತ್ತಿಲ್ಲ. ತಲುಪಬೇಕಾದ್ದು ಎಲ್ಲಿಗೆ ಅನ್ನೋದು ಗೊತ್ತಿದ್ದ ಕಾರಣ ಬದುಕಿನ ಅನಿವಾರ್ಯತೆಗಳ ಜೊತೆಗೆ ಯಾವುದು ಲೆಕ್ಕಕ್ಕೆ ಬರೆದೆ ಸಾಗಿದೆವು.
ಮುಂದಿನ ಹೆಜ್ಜೆಯನ್ನು ಮಾತ್ರ ಇಡುತ್ತಿದ್ದೇವೆ ವಿನಹ ಮುಂದಾಲೋಚನೆ ಇರಲಿಲ್ಲ. ಅಜ್ಜಿ ಮನೆಗೆ ಪೋಲೀಸರ ಪ್ರವೇಶವಾಗಲಿಲ್ಲ. ಪಕ್ಕದ ಗುಡ್ಡದಲ್ಲಿ ಗುಂಡಿ ತೆಗೆದು ಕಂಬ ನಿಲ್ಲಿಸಿ, ತೆಂಗಿನ ಗರಿ ಮುಚ್ಚಿದರು. ಅಮ್ಮ ಸೆಗಣಿ ಸಾರಿಸಿದರು. ಒಲೆಯಲ್ಲಿ ಅನ್ನ ಬೇಯುತ್ತಿತ್ತು ಉಪ್ಪಿನ ಜೊತೆಗೆ ತುಂಬಾ ರುಚಿಯಾಗಿ ಹೊಟ್ಟೆಗಿಳಿಯಿತು. ನಾಲ್ವರು ಮುದುಡಿ ಮಲಗಿದೆವು. ನೆಮ್ಮದಿಯ ನಿದ್ರೆ ಬಂದಿತ್ತು. ನಾಳಿನ ಸೂರ್ಯೋದಯ ಎಂದಿನಂತಿರಲ್ಲ ಆ ಆಲೋಚನೆಯೊಂದು ಮಾತ್ರ ನಮ್ಮೊಳಗಿತ್ತು.
ಧೀರಜ್ ಬೆಳ್ಳಾರೆ