LATEST NEWS
ದಿನಕ್ಕೊಂದು ಕಥೆ- ಸೈನಿಕ
ಸೈನಿಕ
ಆ ಸಮವಸ್ತ್ರ ಧರಿಸಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕೆಂಬ ಉತ್ಕಟ ಆಸೆ ಚಿಕ್ಕಪ್ರಾಯದಲ್ಲೇ ಮೂಡಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಗಡಿಯಲ್ಲಿ ನಿಂತು ಕಾಯಬೇಕು, ಅದೇ ಪರಮ ಧ್ಯೇಯ. ದಿನವೂ ಅಭ್ಯಾಸ .ಎರಡೆರಡು ಸಲ ಅವಕಾಶ ಕಳೆದುಕೊಂಡರು ಮತ್ತೆ ಪ್ರಯತ್ನಿಸಿ ಆಯ್ಕೆಯಾಗಿ ಮನೆಗೆ ಪತ್ರ ಬಂದಿತು.
ಬ್ಯಾಗು ಹೆಗಲಿಗೇರಿಸಿ ಹೊರಟುಬಿಟ್ಟ. ತಾಯಿಯ ಸೇವೆಗೆ. ತರಬೇತಿ ಪಡೆದು ಬಂದೂಕು ಹೆಗಲಿಗೇರಿಸಿ, ಸಮವಸ್ತ್ರ ಧರಿಸಿ,ಗಡಿಯ ಕಾಯುತಿದ್ದ. ಅಲ್ಲೊಂದು ನಿರ್ಜನ ಕಾಡಿನಲ್ಲಿ ದೊಡ್ಡವರ ಕೆಲವರ ಸಹಕಾರದಿಂದ ಹೋರಾಟಕ್ಕಾಗಿ ಜೊತೆಯಾದ ತಂಡದವರು ಶಸ್ತೃಧಾರಿಗಳಾಗಿ ತಮ್ಮ ಅಧಿಕಾರ ಸ್ಥಾಪನೆಗೆ ಗುಂಡುಹಾರಿಸಿದರು.
ಇಲ್ಲಿನ ಚಕಮಕಿಯಲ್ಲಿ ಅವರ ಎರಡು ಹೆಣಗಳು ಬಿದ್ದರೆ ನಮ್ಮ ಸೈನಿಕರದು ಹಲವು. ನಮ್ಮ ಕಥಾನಾಯಕ ಅಪ್ರತಿಮ ಕನಸಿನ ಹುಡುಗ , ಹೊರಗಿನ ಶತ್ರುಗಳು ಆಕ್ರಮಣ ಮಾಡಿದರೆ ಎದೆಯೊಡ್ಡುತ್ತೇನೆ ಅವರನ್ನು ಹಿಮ್ಮೆಟ್ಟಿಸುತ್ತೇನೆ ಎಂದವ ನಮ್ಮೊಳಗಿನ ಶತ್ರುಗಳಿಗೆ ಅರಿವಿಲ್ಲದೇ ಬಲಿಯಾಗಿ ಬಿಟ್ಟ.
ದೊಡ್ಡವರ ಕಾಳಗದಲ್ಲಿ ಶವಪೆಟ್ಟಿಗೆಗಳು ಪುಟ್ಟ ಮನೆಗೆ ದೌಡಾಯಿಸುತ್ತವೆ. ದುಡಿತವ ನಂಬಿದ ಮನೆಗಳು ಕಣ್ಣೀರು ಹರಿಸುತ್ತವೆ. ಕನಸುಗಳು ಸ್ವರ್ಗಸ್ಥವಾಗಿವೆ. ಪ್ರತಿರೋಧಗಳು ಚರ್ಚೆ ಮಾತಿನಲ್ಲಿ ತೀರ್ಮಾನಕ್ಕೆ ಬರಲಿ. ಜೀವ ಕಳೆದುಕೊಂಡ ಮನೆಯು ಮಾತ್ರ ಸೋರುತ್ತದೆ.
ಧೀರಜ್ ಬೆಳ್ಳಾರೆ