LATEST NEWS
ದಿನಕ್ಕೊಂದು ಕಥೆ- ಮಾತುಕತೆ
ಮಾತುಕತೆ
“ಲೇ, ದೀಪು ಎಷ್ಟು ಸಲ ಹೇಳೋದು ನಿನಗೆ ಊಟ ಮಾಡುವಾಗ ಮೊಬೈಲ್ ಯೂಸ್ ಮಾಡಬೇಡ ಅಂತ, ಮಾತೇ ಕೇಳೋದಿಲ್ಲ ಅಲ್ವಾ?”. “ಏನಮ್ಮಾ ನಿಂದು, ನಾನು ಊಟ ಮಾಡುತ್ತಿದ್ದೇನೆ ತಾನೆ !,ಹೇಗೆ ತಿಂದರೂ ಹೊಟ್ಟೆಗೆ ತಾನೆ ಹೋಗೋದು”
“ಅದಕ್ಕೊಂದು ಗೌರವವಿದೆ ,ಮೊದಲು ,ಅದನ್ನು ನೀಡು”.
” ಅಮ್ಮ ಯಾಕೆ ನೀನು ಅಕ್ಕನಿಗೆ ಬೈತಾನೆ ಇರ್ತಿಯ ,ನೆಮ್ಮದಿಯಾಗಿ ತಿನ್ನೋಕೆ ಬಿಡಲ್ಲ”
“ನೀನು ಬರಬೇಡ . ಬರೋದೇ ತಡವಾಗಿ ಆಮೇಲೆ ತಣ್ಣಗಾಗಿರುತ್ತೆ ಅಂತ ಮತ್ತೊಂದಷ್ಟು ಪ್ರವಚನಗಳನ್ನು ಕೊಡು ನನಗೆ”.
” ಅದೇ ದೋಸೆ, ಬೇರೇನೂ ಮಾಡಕ್ಕೆ ಬರೋದಿಲ್ಲ ನಿನಗೆ , ನನಗೆ ಬೇಡ”
“ನನಗೂ ಬೇಡ ನಾನು ಹೋಗ್ತೇನೆ ”
“ಲೇ ಯಾಕೆ ಬೈತಿಯಾ ಮಕ್ಕಳಿಗೆ,ಅವರಾಗೆ ತಿಂದು ಹೋಗೋದಿಲ್ವಾ?. ತಿನ್ನದ ಹಾಗೆ ಮಾಡ್ತಿದ್ದೀಯಾ, ನಿನಗೆ ಯಾವಾಗ ಬುದ್ಧಿ ಬರುತ್ತೋ ? ಮಾಡಿದ್ದನ್ನು ನೀನೇ ತಿನ್ಕೋ “.
ಮನೆ ಖಾಲಿಯಾಯಿತು .ತಿಂಡಿಯನ್ನ ಪಕ್ಕದ ಮನೆಯವರಿಗೆ ನೀಡಿದಳು. ಮುಂಜಾನೆ ಎದ್ದು ಎಲ್ಲವೂ ತಯಾರಾಗಿ, ನೆಲ ಗುಡಿಸಿ, ಒರೆಸಿ ,ಬಟ್ಟೆ ಒಗೆದು, ಮಧ್ಯಾಹ್ನ ರಾತ್ರಿಗೆ ಸಿದ್ದತೆ ಮಾಡುವಾಗ ಸಂಜೆಯ ಹೆಜ್ಜೆ ಸಪ್ಪಳ ಕೇಳಿಸಿತು. ಮತ್ತೆ ಕೆಲಸ ಆರಂಭ.ಆದರೆ ಈ ದಿನ ಮೌನವಾದಳು.
” ಏನೇ ಮನೇಲೇನೋ ಕೆಲಸ ಆದ ಹಾಗೆ ಕಾಣ್ತಾನೆ ಇಲ್ಲ” “ಅಮ್ಮಾ ಟೀ” .”ಅಮ್ಮಾ ನಾಳೆ ಇದೆ ಬಟ್ಟೆ ಹಾಕಬೇಕು ತೊಳೆದಿಡು”.” ಏನಾಯ್ತು ನಿಮ್ಮಮ್ಮನಿಗೆ ಮಾತಾಡ್ತಾನೆ ಇಲ್ಲ”.”ಬಾ ಊಟಕ್ಕೆ ಹಾಕು, ಇದೇನು ಖಾಲಿ ಹೊಟ್ಟೆಗೆ ಏನಿಲ್ವಾ?”
” ನಂಗೇನ್ ಗೊತ್ತು, ದಿನವೂ ಕೂಗಾಡ್ತೀರಾ, ಮನೆಕೆಲಸ ಅಂದರೆ ತುಂಬಾ ಸದರವಾಗಿ ಕಾಣುತ್ತೆ ಅಲ್ವಾ?. ನಾನು ನಮ್ಮವರಿಗಾಗಿ ದುಡಿಯೋದು. ನಾನು ನಿಮ್ಮಲ್ಲಿ ಒಬ್ಬಳೇ ತಾನೇ , ನಿಮಗೆ ಒಳ್ಳೆಯದಾಗಬೇಕು ಅಂತ ಹೇಳಿದ ಮಾತುಗಳು ಖಾರವಾಗುತ್ತಲ್ಲ. ಇವತ್ತು ನೀರು ಕುಡಿದೆ ಮಲಗಿ” ……….ಮೌನ……..” ಬನ್ನಿ ಅಡುಗೆ ತಯಾರಾಗಿದೆ”
ಊಟ ಸಾಗಿತು ಜೊತೆಗೆ. …ಬಾಂಧವ್ಯದೊಂದಿಗೆ…..
ಧೀರಜ್ ಬೆಳ್ಳಾರೆ