Connect with us

    LATEST NEWS

    ದಿನಕ್ಕೊಂದು ಕಥೆ- ಯಾರಿವನು

    ಯಾರಿವನು

    ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ ,ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ “ಹುಚ್ಚಾ” ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ .ಈಗ ಕರಿಯೋ ಹುಚ್ಚನೆಂಬ ನಾಮದೇಯಕ್ಕೆ ಬೇಸರವೂ ಇಲ್ಲ .
    ಅವನು ಸುರಿಯುವ ಮಳೆಗೆ ಮೈಯೊಡ್ಡಿ ನಿಂತು ದೇವರಿಗೆ ಧನ್ಯವಾದ ತಿಳಿಸುತ್ತಾನೆ.

    ಮಳೆಯೊಂದಿಗೆ ಕಣ್ಣೀರು ಸುರಿಸುತ್ತಾನೆ. ಕಾಲಿನೊಂದಿಗೆ ಕೆಸರಾಟವಾಡುತ್ತಾನೆ. ರಸ್ತೆಯಲ್ಲೊಂದು ಅಪಘಾತವಾದಾಗ ಘಟನೆ ವಿವರಿಸುತ್ತಿರುವ ಮನಸ್ಸುಗಳ ನಡುವೆ ರಕ್ತದ ಮಡುವಿನಲ್ಲಿ ಇರುವವರಿಗೆ ಗಾಡಿಗೆ ಹಾಕಿ ಹೋಗೆಂದು ತಿಳಿಸುತ್ತಾನೆ. ದಿನಾಚರಣೆಗಳ ಅಂಗವಾಗಿ ನೆಟ್ಟ ಗಿಡಗಳಿಗೆ ದಿನವೂ ನೀರು ಹಾಕಿ ಮಾತಾಡಿಸುತ್ತಾನೆ. ಬೀದಿಯಲ್ಲಿ ಓಡಾಡು ನಾಯಿ ದನಗಳಿಗೆ ಬೈದು ಆಹಾರವಿರುವ ಜಾಗ ತೋರಿಸುತ್ತಾನೆ .

    ವೈದ್ಯರು, ಶಿಕ್ಷಕರು, ಇಂಜಿನಿಯರ್ಗಳು ಕನಿಷ್ಠ ಐದು ವರ್ಷ ಹಳ್ಳಿಲಿ ದುಡಿದು ಪೇಟೆಗೆ ಸಾಗಲಿ ಎಂದು ಗಂಟಲು ಹರಿಯುವಂತೆ ಹೇಳುತ್ತಾನೆ.ದುಡ್ಡು ಗಳಿಸಿ ಸನ್ಮಾನ ಸ್ವೀಕರಿಸುವವನ್ನು ಕಂಡು ಥೂ ಎಂದು ಉಗುಳಿ ಊರಿನ ಸರಕಾರಿ ಶಾಲೆಯ ಹಂಚು ಸರಿಮಾಡೋಕೆ ಹೊರಡುತ್ತಾನೆ.

    ಮೋಜು-ಮಸ್ತಿಗೆ ತೆರಳುವ ಜನಗಳಿಗೆ ಗದ್ದೆಯ ಕೆಸರಲ್ಲಿ ಪಾದ ಊರಲು ಬೇಡುತ್ತಾನೆ. ಗೋಡೆಗಂಟಿದ ಜಾಹೀರಾತುಗಳಲ್ಲಿ ಅಂದಕ್ಕಿಂತ ಅನ್ನ ಮುಖ್ಯವೆಂದು ಕಿರುಚಿ ಹರಿದು ಹಾಕುತ್ತಾನೆ .ರಾತ್ರಿ-ಹಗಲೆನ್ನದೆ ಬರಿಯ ಪುಸ್ತಕದಲ್ಲಿ ಮಗನ ತುರುಕಿದ ಮನೆಯ ಮುಂದೆ ಬಲೂನ್ ,ಆಟಿಕೆ ಚಂದದ ಪುಸ್ತಕ ಇಟ್ಟು ನಕ್ಕು ಕರಿತಾನೆ.

    ಇವನನ್ನು ನೋಡಿ ನನಗೂ ಹುಚ್ಚನಾಗಿ ಬಿಡಬೇಕು ಅನಿಸ್ತಾಯಿದೆ. ಅಲ್ಲ‌ ಅಲ್ಲ ಅವನ ತರ ಮನುಷ್ಯನಾಗಿ ಬಿಡಬೇಕು ಹುಚ್ಚರೊಂದಿಗೆ ಬದುಕೋದಕ್ಕಿಂತ ಅದೇ ಒಳ್ಳೆಯದಲ್ಲವೆ. ದೃಷ್ಟಿ ಬದಲಾಗಬೇಕು ನನ್ನದು. ಹಾ “ನಾಳೆಯಿಂದ”‌ ಆರಂಭಿಸುವ

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *