LATEST NEWS
ದಿನಕ್ಕೊಂದು ಕಥೆ- ಬೇಟೆ
ಬೇಟೆ
ಅವತ್ತು ಭಾನುವಾರ ಮನೇಲಿ ಮಾಡೋಕೆ ಕೆಲಸ ಇರಲಿಲ್ಲ. ಅಪ್ಪನ ಜೊತೆ ಏಡಿ ಹಿಡಿಯೋಕೆ ನಮ್ಮೂರ ಸಣ್ಣ ಕಿಂಡಿ ಅಣೆಕಟ್ಟಿನ ಜಾಗಕ್ಕೆ ಹೋದೆ. ಅಲ್ಲಿ ಏಡಿ ಹೆಚ್ಚಾಗಿರುತ್ತದಂತೆ. ಸ್ವಲ್ಪ ಕೋಳಿ ಮಾಂಸ ಸಣ್ಣಕತ್ತಿ ಹಿಡಿದು ರಣಭೂಮಿಗೆ ಸೇನಾನಿಯಂತೆ ತಲುಪಿದ್ದೆ.
ಅಲ್ಲಿ ನೀರೊಳಗೆ ಮಾಂಸವನ್ನು ಕೋಲಿಗೆ ಕಟ್ಟಿ ಕಾಯಬೇಕು …ಕಾದರೆ ಮಾತ್ರ ಬೇಕಾದ್ದು ಸಿಗೋದು.ಅದರ ವಾಸನೆ ನೀರೊಳಗೆ ಸಾಗಿ ಏಡಿಗೆ ತಲುಪಿ ಅದು ಹುಡುಕಿಕೊಂಡು ಬರಬೇಕು. ಅವತ್ತು ಭಾನುವಾರವಾದ್ದರಿಂದ ಏಡಿಗೂ ರಜಾದಿನ ಅಂತ ಕಾಣುತ್ತೆ.
ಯಾವುದರ ಸುಳಿವೇ ಇಲ್ಲ .ಆದರೆ ಸೊಳ್ಳೆಗಳಿಗೆ ರಜೆ ಇರಲಿಲ್ಲ.
ಆಲಾಪದೊಂದಿಗೆ ರಕ್ತಮಂಜರಿ ಕಾರ್ಯಕ್ರಮ ನಡೆಸ್ತಾ ಇದ್ದವು. ಏಕಾಗ್ರತೆಯಿಂದ ಗುರು ಸಾಧಿಸಬೇಕಂತೆ. ಸಾಧಿಸೋಕೆ ಸೊಳ್ಳೆ ಬಿಡ್ತಾ ಇಲ್ಲ. ದೂರದಲ್ಲೊಂದು ಏಡಿ ಬರ್ತಾ ಇತ್ತು. ಸೊಳ್ಳೆ ಓಡಿಸೋಕೆ ಕೈಯಾಡಿಸಿದೆ, ಏಡಿ ತಿರುಗಿ ಹೋಯಿತು. ಅಲ್ಲಿಂದ ಹೋದ ಏಡಿ ತನ್ನ ಗೆಳೆಯರಿಗೆ ಹೇಳಿ ಎಲ್ಲರನ್ನೂ ಕರ್ಕೊಂಡು ಬರಬಹುದು ಅಂತ ಅನ್ಕೊಂಡೆ ಇಲ್ಲ.. ಅದಕ್ಕೆ ಸುಳಿವು ಸಿಕ್ಕಿದಾಗ ಕಾಣುತ್ತೆ ,ಅಥವಾ ಅದರ ಡೆತ್ ಡೇಟ್ ಇವತ್ತಲ್ಲ ಅನ್ಸುತ್ತೆ.ಮನೇಲಿ ಸಾಂಬಾರಿಗೆ ತಯಾರಾಗಿತ್ತು.
ಯುದ್ಧದಲ್ಲಿ ಸೋತು ಶರಣಾಗೋನು ನಾನಲ್ಲ .ನನ್ನ ಆಸೆಯ ಪುಣ್ಯವೊ ಏನೋ ಎರಡು ಏಡಿಗಳು ಮಾಂಸದಾಸೆಗೆ ಬಂದು ಬಲಿಯಾದವು. ಸಾಂಬಾರು ರುಚಿಯಾಗಿತ್ತು.ಹೆಚ್ಚಾಗಿ ಈ ಸೊಳ್ಳೆಗಳ ಕಡಿತದಿಂದ ತುರಿಸುವುದೇ ಜಾಸ್ತಿಯಾಗಿ ಅಸ್ವಾದನೆ ಮಾಡೋಕೆ ಆಗಲೇ ಇಲ್ಲ. ಇಲ್ಲ ಇಲ್ಲಿ ಬೋಧನೆ ಏನು ಇಲ್ಲ…..
ಅಲ್ಲಿ ಸ್ವಲ್ಪ ಹೊತ್ತು ಕಾದದ್ದಕ್ಕೆ ಏಡಿ ಸಿಕ್ಕಿದ್ದು …..
ಆಸೆ ಹೆಚ್ಚಾದ್ರಿಂದ ಏಡಿ ಬಲಿಯಾದದ್ದು …..
ನಾಳೆ ಸಿಗೋಣ…..
ಧೀರಜ್ ಬೆಳ್ಳಾರೆ