LATEST NEWS
ದಿನಕ್ಕೊಂದು ಕಥೆ- ಬದುಕೊಂದರ ತಿರುಗಾಟ

ಬದುಕೊಂದರ ತಿರುಗಾಟ
ಬೆಳಕಿನ ಚಿತ್ತಾರ ಕಣ್ಣೊಳಗಿನ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ಎಲ್ಲಾ ವಿದ್ಯುತ್ ಅಲಂಕಾರ ದೀಪಗಳು ವಿವಿಧ ಬಗೆಯ ನೃತ್ಯವನ್ನು ಮಾಡುತ್ತಲಿದೆ. ದೇವಾಲಯ ದ್ವಾರದಿಂದ ಹಿಡಿದು ಅಂಗಣದವರೆಗೂ ಮನಸ್ಸು ಮುದಗೊಳಿಸುವ ಅಲಂಕಾರವಿದೆ. ಅಲ್ಲೊಂದು ದೀಪದ ಕಂಬದ ಕೆಳಗೆ ಸ್ವಲ್ಪ ನೆರಳಿನ ನಡುವೆ ಇವರು ಕುಳಿತಿದ್ದಾರೆ.
ಬೆಳಕು ಅವರ ಕಣ್ಣು ಒಳಗಿಂದ ಹಾದು ಹೋಗುತ್ತಾ ಜನರನ್ನು ಕರೆಯುತ್ತಿದೆ.ಸಂಜೆಗೆ ಮೊದಲೇ ಪ್ಲಾಸ್ಟಿಕ್ ಹಾಸಿ ಆಟಿಕೆ ಸಾಮಾನುಗಳನ್ನು ಹರಡಿಸಿ ಕಾಯುತ್ತಿದ್ದಾರೆ . ಕಾಲುಗಳು ಇವರ ಕಡೆಗೆ ನಡೆದು ಬಂದು ಖರೀದಿಸಿ ಒಂದೆರಡು ನೋಟುಗಳು ಗಲ್ಲಾಪೆಟ್ಟಿಗೆ ತುಂಬಿದವು. ಅಪ್ಪ-ಅಮ್ಮ ಮಾರೋದನ್ನು ಮೂಲೆಯಲ್ಲಿ ಕುಳಿತು ಅವನು ನೋಡುತ್ತಿದ್ದಾನೆ.

ಹೊಟ್ಟೆ ಏನೇನೋ ಬಯಸಿದರು ನಾಲಿಗೆ ಕೇಳೋಕೆ ಹೋಗುತ್ತಿಲ್ಲ .ಜಾತ್ರೆ ,ಉರೂಸ್, ಚರ್ಚೆಗಳ ಉತ್ಸವಕ್ಕೆ ಪ್ಲಾಸ್ಟಿಕ್ ಹಾಸಿಯೇ ಪುಡಿಕಾಸು ಸಿಗಬೇಕು. ನೆಲದ ಮೇಲೆ ಮಲಗಿದರೆ ನೆಮ್ಮದಿಯ ನಿದ್ರೆ ಬೀಳುತ್ತದೆ, ದೇಹ ಒಗ್ಗಿಹೋಗಿದೆ ಅದಕ್ಕೆ .ಹಸಿವು ಕಲಿಸುತ್ತಿದೆ ಎಲ್ಲವನ್ನು .ಹುಡುಗ ಸಂಭ್ರಮವನ್ನು ಕಂಡಿದ್ದಾನೆ ಹೊರತು ಅನುಭವಿಸಿಲ್ಲ.
ಆಟಿಕೆಗಳ ಕೊಂಡವರ ಮೊಗದಲ್ಲಿನ ನಗು ಇವನ ಕಡೆಗೆ ಹರಿಯಲಿಲ್ಲ. ಜನ ಖಾಲಿಯಾಗುತ್ತಿದ್ದಾರೆ. ಸಿಕ್ಕ ಚಿಲ್ಲರೆ ಅಪ್ಪನ ಜೋಬಿಗೇರಿತು. ಪ್ಲಾಸ್ಟಿಕ್ ಮಡಚಿ ಗಂಟು ಹೊತ್ತು ನಡೆಯುತ್ತಿದ್ದಾರೆ ಇನ್ನೊಂದೂರಿಗೆ ….
ಆಸೆ ಕನಸುಗಳೆಲ್ಲಾ ಆಟಿಕೆಗಳ ಒಳಗೆ .ಅದು ನಮ್ಮಗಳ ಮನೆಗೆ ಬಂದರೆ ಅವರ ಮನೆಯಲ್ಲಿ ಅನ್ನ ಬೇಯಬಹುದು.
ಧೀರಜ್ ಬೆಳ್ಳಾರೆ