BELTHANGADI
ಧರ್ಮಸ್ಥಳ ಪ್ರಕರಣ – ಎರಡನೆ ದಿನವೂ ಎಸ್ಐಟಿಯಿಂದ ದೂರುದಾರನ ವಿಚಾರಣೆ

ಬೆಳ್ತಂಗಡಿ ಜುಲೈ 27: ಧರ್ಮಸ್ಥಳ ಗ್ರಾಮದಲ್ಲಿ ಹೂತು ಹಾಕಲಾಗಿರುವ ಶವಗಳ ಕುರಿತಂತೆ ರಾಜ್ಯ ಸರಕಾರ ನಡೆಸುತ್ತಿರುವ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಈಗಾಗಲೇ ಎಸ್ ಐಟಿ ದೂರುದಾರನ ವಿಚಾರಣೆ ಪ್ರಾರಂಭಿಸಿದ್ದು. ಇಂದು ಎರಡನೇ ಮತ್ತೆ ದೂರುದಾರನ ವಿಚಾರಣೆ ಪ್ರಾರಂಭಿಸಿದೆ.
ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ರವಿವಾರ ಎಸ್‌ಐಟಿ ತಂಡವು ದೂರುದಾರನ ವಿಚಾರಣೆ ನಡೆಸುತ್ತಿದೆ. ರವಿವಾರ ಬೆಳಗ್ಗೆ 10.30ರ ಸುಮಾರಿಗೆ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಪ್ರಣಬ್ ಮೊಹಾಂತಿ ಎಸ್.ಐ.ಟಿ ಕಚೇರಿಗೆ ಆಗಮಿಸಿ, ದೂರುದಾರನ ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 26ರಂದು ದೂರುದಾರನನ್ನು ಪೊಲೀಸ್ ಅಧಿಕಾರಿಗಳಾದ ಅನುಚೇತ್, ಜಿತೇಂದ್ರ ಕುಮಾರ್ ದಯಾಮ ಸಹಿತ ಇತರ ಸಿಬ್ಬಂದಿ ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ ಬಳಿಕ ಸಂಜೆ ವೇಳೆ ಅವರ ವಕೀಲರ ಜೊತೆ ಕಳುಹಿಸಿ ಕೊಟ್ಟಿದ್ದರು. ರವಿವಾರ ಮತ್ತೆ ದೂರುದಾರನನ್ನು ಎಸ್.ಐ.ಟಿ ಕಚೇರಿಗೆ ಕರೆಸಿದ್ದು, ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.