BELTHANGADI
ಧರ್ಮಸ್ಥಳ ಪ್ರಕರಣದ ಎಸ್ಐಟಿ ತಂಡಕ್ಕೆ ಬೆಳ್ತಂಗಡಿಯಲ್ಲೇ ಕಚೇರಿ

ಬೆಳ್ತಂಗಡಿ ಜುಲೈ 25: ಅನಾಮಧೇಯ ವ್ಯಕ್ತಿಯ ದೂರಿನನ್ವಯ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರಕಾರ ರಚಿಸಿರುವ ಎಸ್ ಐಟಿ ತಂಡ ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿದೆ ಎಂದು ವರದಿಯಾಗಿದೆ. ಈಗಾಗಲೇ ವಿಶೇಷ ತನಿಖಾ ತಂಡವು ಧರ್ಮಸ್ಥಳದತ್ತ ಹೊರಟಿದೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಿಂದ ಧರ್ಮಸ್ಥಳದತ್ತ ತಂಡವು ಬರುತ್ತಿದೆ ಎಂದು ಹೇಳಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸದ್ಯ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್ ಅವರ ನೇತೃತ್ವದಲ್ಲಿ ತಂಡವು ದಕ್ಷಿಣ ಕನ್ನಡಕ್ಕೆ ತೆರಳಿದೆ. ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳರು ಭಾಗದ ಅಧಿಕಾರಿಗಳು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬೆಳ್ತಂಗಡಿಗೆ ಬರುವ ಸಾಧ್ಯತೆ ಇದೆ. ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ ತೆರೆಯಲಾಗಿದೆ. ಅಲ್ಲಿ ಕಂಪ್ಯೂಟರ್ ಸೇರಿದಂತೆ ತನಿಖೆಗೆ ಅನುಕೂಲವಾಗುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
