BELTHANGADI
ಧರ್ಮಸ್ಥಳ – ಪಾಯಿಂಟ್ 1 ರಲ್ಲಿ ದೊರೆತ ಪಾನ್ ಕಾರ್ಡ್ ನ ವ್ಯಕ್ತಿಯ ಗುರುತು ಪತ್ತೆ

ಧರ್ಮಸ್ಥಳ ಜುಲೈ 31: ಧರ್ಮಸ್ಥಳ ಪ್ರಕರಣದಲ್ಲಿ ನಿನ್ನೆ ದೂರುದಾರ ಗುರುತಿಸಿದ ಪಾಯಿಂಟ್ 1 ರಲ್ಲಿ ಸಿಕ್ಕಿದ್ದ ಪಾನ್ ಕಾರ್ಡ್ ಮಾಹಿತಿನ ವಿವರಗಳು ಎಸ್ಐಟಿಗೆ ಸಿಕ್ಕಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಇದೀಗ ಭಾರೀ ಬೆಳವಣಿಗೆಗಳು ನಡೆದಿದೆ. ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗದಲ್ಲಿ ಎಸ್ಐಟಿ ನೆಲ ಅಗೆದಾಗ ಪಾನ್‌ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪತ್ತೆಯಾಗಿತ್ತು. ಇದೀಗ ಅದರ ವಿವರಗಳು ಬಹಿರಂಗವಾಗಿವೆ. ಇನ್ನೊಂದೆಡೆ 6ನೇ ಸ್ಥಳದಲ್ಲಿ ಅಸ್ಥಿಪಂಜರಗಳು ಸಿಕ್ಕಿವೆ.

ಮೊದಲ ಸ್ಥಳದಲ್ಲಿ ಅಗೆಯುವಾಗ ಪುರುಷರೊಬ್ಬರ ಪ್ಯಾನ್ ಕಾರ್ಡ್ ಪತ್ತೆಯಾಗಿತ್ತು. ಈ ವ್ಯಕ್ತಿಯ ಕುಟುಂಬವನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಕ್ತಿಯದ್ದು ಎಂದು ಗೊತ್ತಾಗಿದೆ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸುರೇಶ್ ಎಂಬ ವ್ಯಕ್ತಿ ಮಾರ್ಚ್ 2025ರಲ್ಲಿ ತನ್ನ ಸ್ವಂತ ಗ್ರಾಮದಲ್ಲಿ ಕಾಮಾಲೆಯಿಂದ ನಿಧನರಾಗಿದ್ದರು. ಅಲ್ಲಿಯೇ ಅವರ ಅಂತ್ಯಕ್ರಿಯೆಯನ್ನು ಸಹ ನಡೆಸಲಾಗಿತ್ತು. ಈ ಪ್ಯಾನ್ ಕಾರ್ಡ್ ಅವರದ್ದೇ ಎಂದು ತಿಳಿದು ಬಂದಿದೆ.
ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ಆ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ತಂದೆ ಮಗನ ಪ್ಯಾನ್ ಕಾರ್ಡ್ ಅನ್ನು ದೃಢಪಡಿಸಿದ್ದಾರೆ. ಮೃತ ವ್ಯಕ್ತಿ ಮದ್ಯವ್ಯಸನಿಯಾಗಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದು, ಸಾಯುವ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಈ ಪ್ಯಾನ್ ಕಾರ್ಡ್ ಕಳೆದುಹೋಗಿರಬಹುದು ಎಂದು ಶಂಕಿಸಿದ್ದಾರೆ.
ಇನ್ನು ಎಟಿಎಂ ಕಾರ್ಡ್ ಜೊತೆ ಮಹಿಳೆ ಒಬ್ಬರ ಡೆಬಿಟ್ ಕಾರ್ಡ್ ಕೂಡ ಪತ್ತೆಯಾಗಿತ್ತು. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಬ್ಯಾಂಕ್ ಅನ್ನು ಸಂಪರ್ಕಿಸಿದ್ದು, ಅವರು ಇನ್ನೂ ರೂಪೇ ಡೆಬಿಟ್ ಕಾರ್ಡ್ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಅವರು ಇರಬಹುದಾದ ಸ್ಥಳದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.