DAKSHINA KANNADA
ಧರ್ಮಸ್ಥಳ : ಓವರ್ ಟೇಕ್ ಭರದಲ್ಲಿ ಬೈಕ್ ಸ್ಕಿಡ್, ಶಿವಮೊಗ್ಗದ ಯುವಕ ಮೃತ್ಯು..!
ಧರ್ಮಸ್ಥಳ ಆಗಸ್ಟ್ 26 : ದಕ್ಷಿಣ ಕನ್ನಡದ ದೇವಾಲಯಗಳನ್ನು ಸಂದರ್ಶಿಸಲು ಬಂದು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಶಿವಮೊಗ್ಗದ ಯುವಕ ದಾರುಣ ಅಂತ್ಯ ಕಂಡಿದ್ದಾನೆ.
ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಬಳಿ ಈ ದುರ್ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಮೃತ ಯುವಕನಾಗಿದ್ದಾನೆ. ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ ಕಾಲೇಜಿನ ಮುಂಭಾಗ ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ವಾಹನವನ್ನು ನೋಡಿ ಯುವಕ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ.ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ದೇವರಾಜ್ ಗಂಭೀರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಚರಂಡಿಗೆ ಬಿದ್ದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಎಸ್.ಐ ಅಭಿನಂದನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login