DAKSHINA KANNADA
ಮಂಗಳೂರು: ಆಝಾನ್ ವಿರೋಧಿಸಿ ಮುಂಜಾನೆ ಮೊಳಗಿದ ಕೊರಗಜ್ಜನ ಭಕ್ತಿಗೀತೆ
ಮಂಗಳೂರು, ಮೇ 09: ಆಝಾನ್ ವಿರೋಧಿಸಿ ಭಜನೆ ಹಾಗೂ ಸುಪ್ರಭಾತ ಅಭಿಯಾನವನ್ನು ಇಂದು ಮುಂಜಾನೆ ರಾಜ್ಯಾದ್ಯಂತ ಶ್ರೀರಾಮ ಸೇನೆ ಆರಂಭಿಸಿದೆ. ಮಂಗಳೂರು ನಗರದ ಮೂಡುಶೆಡ್ಡೆ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್‌ನಲ್ಲಿ ಕೊರಗಜ್ಜನ ಭಕ್ತಿಗೀತೆ ಮೊಳಗಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದಲ್ಲಿ ಮೈಕ್ ಅಳವಡಿಸಿದ ಶ್ರೀ ರಾಮಸೇನೆಯ ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ನೇತೃತ್ವದಲ್ಲಿ ಕಾರ್ಯಕರ್ತರು ಬೆಳಿಗ್ಗೆ 5:05 ನಿಮಿಷದಿಂದ 6:00 ಗಂಟೆಯವರೆಗೆ ಕೊರಗಜ್ಜನ ಭಕ್ತಿ ಗೀತೆಗಳನ್ನು ಹಾಕಿದರು.
ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಇಂದು ನಡೆಯುವ ಅಭಿಯಾನದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇತ್ತು. ಜೊತೆಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು.
ಅದರಂತೆ ಕಮೀಷನರೇಟ್ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ 40 ನಿಮಿಷಗಳ ಕಾಲ ಭಕ್ತಿಗೀತೆ ಹಾಕಿದ್ದಾರೆ. ಅದರ ಪರಿಶೀಲನೆ ನಡೆಯುತ್ತಿದೆ. ಆಝಾನ್‌ಗೆ ತೊಂದರೆ ಕೊಡುವ ಘಟನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.