LATEST NEWS
ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ದೇವಸ್ಥಾನಕ್ಕೆ ಬೀಗ ಹಾಕುವುದಾಗಿ ಎಚ್ಚರಿಕೆ

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ದೇವಸ್ಥಾನಕ್ಕೆ ಬೀಗ ಹಾಕುವುದಾಗಿ ಎಚ್ಚರಿಕೆ
ಕೇರಳ ಅಕ್ಟೋಬರ್ 19: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ದೇವಸ್ಥಾನದ ಬಾಗಿಲು ಹಾಕಿ ಬೀಗ ಸರಕಾರಕ್ಕೆ ನೀಡಿ ನಾವು ತೆರಳುತ್ತೇವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಕಂದಾರರು ರಾಜೀವಾರು ತಿಳಿಸಿದ್ದಾರೆ.
ಇಂದು ಇಬ್ಬರು ಮಹಿಳೆಯರು ಪೊಲೀಸ್ ಸರ್ಪಗಾವಲಿನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಪ್ರಯತ್ನಿಸಿದ್ದರು. ಆದರೆ ಮಹಿಳೆಯರು ದೇಗುಲವನ್ನು ಪ್ರವೇಶ ಮಾಡಿದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಪ್ರಧಾನ ಅರ್ಚಕರು ಬೆದರಿಕೆ ಹಾಕಿದ್ದು, ಇಲ್ಲಿನ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಸಂಪ್ರದಾಯ ಪಾಲಿಸುವುದು ಕೂಡ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹಾಗಾಗಿ ಸಂಪ್ರದಾಯವನ್ನು ಯಾವುದೇ ಕಾರಣಕ್ಕೂ ಮುರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಹೋರಾಟಗಾರ್ತಿ ರಹನಾ ಫಾತಿಮಾ ಪೊಲೀಸರ ಭದ್ರತೆಯೊಂದಿಗೆ ಹೆಲ್ಮೆಟ್ ಧರಿಸಿ ದೇವಾಲಯ ಪ್ರವೇಶಿಸಲು ಮುಂದಾಗಿದ್ದರು. ಕಾಲ್ನಡಿಗೆಯಲ್ಲಿ ದೇವಾಲಯದತ್ತ ಹೋಗುತ್ತಿದ್ದಂತೆ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸಾವನ್ನಪ್ಪಿದರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದರು.
ದೇವಾಲಯಕ್ಕೆ 500 ಮೀಟರ್ ದೂರ ಇದ್ದಾಗ ಪ್ರಧಾನ ಅರ್ಚಕರು ಮಹಿಳೆಯರು ದೇವಾಲಯಕ್ಕೆ ಆಗಮಿಸಿದರೆ ನಾವು ಪೂಜೆ ಮಾಡುವುದನ್ನು ನಿಲ್ಲಿಸುತ್ತೇವೆ. ಅಷ್ಟೇ ಅಲ್ಲದೇ ದೇವಾಲಯದ ಗರ್ಭಗುಡಿಯ ದ್ವಾರವನ್ನೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶದಿಂದ ಹಿಂದಕ್ಕೆ ಸರಿದಿದ್ದಾರೆ.