UDUPI
ನೂತನ ಸಚಿವ ಸುನಿಲ್ ಕುಮಾರ್ ಅವರಿಗೆ ಭರ್ಜರಿ ಸ್ವಾಗತ…ಉಡುಪಿ ಜಿಲ್ಲಾಧಿಕಾರಿ ಆದೇಶ ಕೇವಲ ಜನ ಸಾಮಾನ್ಯರಿಗೆ ಮಾತ್ರನಾ…?
ಉಡುಪಿ ಅಗಸ್ಟ್ 06: ಕೊರೊನಾ ಪ್ರಕರಣಗಳ ಏರಿಕೆ ಹಿನ್ನಲೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸಬಾರದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರೂ ಕೂಡ ಇಂದು ನೂತನ ಸಚಿವರಾಗಿ ಆಯ್ಕೆಯಾದ ಶಾಸಕ ಸುನಿಲ್ ಕುಮಾರ್ ಅವರಿಗೆ ಬಿಜೆಪಿ ಪಕ್ಷ ಭರ್ಜರಿ ಸ್ವಾಗತ ನೀಡುವ ಮೂಲಕ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿದ ಘಟನೆ ನಡೆದಿದೆ.
ಇದೇ ಮೊದಲ ಬಾರಿದೆ ಸಚಿವರಾಗಿ ಆಯ್ಕೆಯಾದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಹೆಜಮಾಡಿ ಮೂಲಕ ಸುನೀಲ್ ಕುಮಾರ್ ಉಡುಪಿ ಜಿಲ್ಲೆಗೆ ಆಗಮಿಸಿದರು. ಬೆಳ್ಮಣ್ ನಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ಅವರು, ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಉಡುಪಿಗೆ ಬರುತ್ತಿರುವುದು ಸಂತೋಷ, ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರುಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಆದರೆ ಯಾವುದೇ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ. ಮೊದಲ ಆಯ್ಕೆ ಹಿಂದುತ್ವ ಮತ್ತು ಅಭಿವೃದ್ಧಿ ಎಂದರು.
ಕೊರೊನಾ ಮಾರ್ಗಸೂಚಿಗಳ ಕುರಿತು ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜನಪ್ರತಿನಿಧಿಗಳು ಸಭೆ ಸಮಾರಂಭದಿಂದ ದೂರ ಇರಬೇಕು, ತನ್ನ ಜವಬ್ದಾರಿ ಅರಿತು ಇರಬೇಕು ಎಂದು ಹೇಳಿದ್ದರು, ಅಲ್ಲದ ಉಡುಪಿಯಲ್ಲಿ ಸೆಕ್ಷನ್ 144(3) ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾವುದೇ ಸಭೆ ಸಮಾರಂಭ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಆದರೂ ಆಡಳಿತ ಪಕ್ಷ ಬಿಜೆಪಿ ಜಿಲ್ಲಾಧಿಕಾರಿಯ ಆದೇಶವನ್ನು ಗಾಳಿ ತೂರಿ ಅಭಿನಂದನಾ ಸಮಾರಂಭ ನಡೆಸುತ್ತಿದೆ.