Connect with us

LATEST NEWS

ಉಗ್ರನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಹೇಳಿಕೊಟ್ಟ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್ಪಿ ಅರೆಸ್ಟ್

ನವದೆಹಲಿ, ಸೆಪ್ಟೆಂಬರ್ 22: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್ ಆಯುಕ್ತರೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಅಧಿಕಾರಿಯನ್ನು ಶೇಖ್ ಆದಿಲ್ ಮುಸ್ತಾಕ್ ಎಂದು ಗುರುತಿಸಲಾಗಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಉಗ್ರನಿಗೆ ಸಹಾಯ ಮಾಡಿದ ಮತ್ತು ಉಗ್ರನ ವಿರುದ್ಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯನ್ನೇ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಆರೋಪ ಶೇಖ್ ಆದಿಲ್ ಮುಸ್ತಾಕ್ ವಿರುದ್ಧ ಕೇಳಿಬಂದಿದೆ.

ಇದಿಷ್ಟೇ ಅಲ್ಲದೆ, ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈ ಅಧಿಕಾರಿ ಭಾಗಿಯಾಗಿದ್ದಾರೆ. ಅಧಿಕಾರಿಯನ್ನು ಶ್ರೀನಗರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಜುಲೈನಲ್ಲಿ ಬಂಧನಕ್ಕೆ ಒಳಗಾದ ಉಗ್ರನ ಮೊಬೈಲ್ ಫೋನ್ ಅನ್ನು ವಿಶ್ಲೇಷಿಸಿದಾಗ ಆತ ಆದಿಲ್ ಮುಷ್ತಾಕ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ. ಈ ಅಧಿಕಾರಿ, ಕಾನೂನಿನ ಕಣ್ಣು ತಪ್ಪಿಸುವುದು ಹೇಗೆ ಎಂದು ಉಗ್ರನಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆದಿಲ್ ಮುಷ್ತಾಕ್ ಟೆಲಿಗ್ರಾಂ ಆಯಪ್‌ನಲ್ಲಿ ಆರೋಪಿಯೊಂದಿಗೆ ಮಾತನಾಡುತ್ತಿದ್ದರು.

ಉಗ್ರ ಮತ್ತು ಉಪ ಅಧೀಕ್ಷಕರ ನಡುವೆ ಕನಿಷ್ಠ 40 ಕರೆಗಳಿವೆ. ಬಂಧನದಿಂದ ತಪ್ಪಿಸಿಕೊಳ್ಳುವುದು ಮತ್ತು ಕಾನೂನು ನೆರವು ಪಡೆಯುವುದು ಹೇಗೆ ಎಂದು ಮಾರ್ಗದರ್ಶನ ನೀಡುತ್ತಿದ್ದರು ಎಂದು ತನಿಖೆಯ ಮೇಲ್ವಿಚಾರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ತನಿಖಾ ಅಧಿಕಾರಿಯನ್ನು ಸಿಲುಕಿಸಲು ಉಗ್ರನ ಪರವಾಗಿ ಬಂಧಿತ ಅಧಿಕಾರಿ ಸುಳ್ಳು ದೂರನ್ನು ರಚಿಸಿದ್ದರು. ಉಗ್ರನಿಂದ ಆದಿಲ್ ಮುಷ್ತಾಕ್ 5 ಲಕ್ಷ ರೂ. ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಹಣಕಾಸು ನಿರ್ವಹಣೆಗಾಗಿ ಸೋಪೋರ್‌ನಲ್ಲಿ ನಕಲಿ ದಾಖಲೆಗಳ ಮೇಲೆ ಬ್ಯಾಂಕ್ ಖಾತೆ ತೆರೆದಿದ್ದ ಮುಝಾಮಿಲ್ ಜಹೂರ್‌ನೊಂದಿಗೆ ಅಧಿಕಾರಿ ನಿಕಟ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply