Connect with us

    UDUPI

    ಮತದಾರರ ಸಬಲೀಕರಣದಿಂದ ಪ್ರಜಾಪ್ರಭುತ್ವದ ಉಳಿವು-ವೆಂಕಟೇಶ್ ನಾಯ್ಕ್

    ಮತದಾರರ ಸಬಲೀಕರಣದಿಂದ ಪ್ರಜಾಪ್ರಭುತ್ವದ ಉಳಿವು – ವೆಂಕಟೇಶ್ ನಾಯ್ಕ್

    ಉಡುಪಿ, ಜನವರಿ 25: ಮುಕ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ ಹಾಗೂ ರಾಷ್ಟ್ರದ ಪ್ರತಿಷ್ಠೆ ಮತ್ತು ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ. ಹೇಳಿದರು.

    ಅವರು ಇಂದು ಉಡುಪಿ ಜಿಲ್ಲಾಡಳಿತ ಎಂ.ಜಿ.ಎಂ ಕಾಲೇಜಿನ ಸಹಯೋಗದೊಂದಿಗೆ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರವಿರುವುದು ಜನರ ಕೈಯಲ್ಲಿ. ಈ ಕಾರಣದಿಂದ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ ಸರಕಾರ ನಡೆಸುವ ಗುರುತರ ಹೊಣೆಗಾರಿಕೆ ಜನತೆಯ ಮೇಲಿದೆ. ಪ್ರಜೆಗಳ ಮತವನ್ನು ಸ್ವೀಕರಿಸಿ ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುವುದು ಪ್ರಜಾಪ್ರಭುತ್ವದ ಆಶಯ. ಜನವಿರೋಧಿ ಸರಕಾರವನ್ನು ಮತದಾನದ ಮೂಲಕವೇ ಕಿತ್ತೆಸೆಯಬಹುದು.

    ಸರಕಾರವನ್ನು ಸ್ಥಾಪಿಸುವ ಮತ್ತು ಅಸಮರ್ಥ ಸರಕಾರವನ್ನು ಕಿತ್ತೆಸೆಯುವ ಅಧಿಕಾರ ಕೂಡ ಚುನಾವಣೆ ಹೊಂದಿದೆ. ಒಟ್ಟಿನಲ್ಲಿ ಜನತೆಗೆ ಆಡಳಿತದಲ್ಲಿ ಪರೋಕ್ಷವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಪ್ರಜಾಪ್ರಭುತ್ವ ಹೊಂದಿದೆ ಎಂದರು.

    ಆಸ್ಟ್ರೇಲಿಯಾದಂತಹ ದೇಶದಲ್ಲಿ ಮತದಾನ ಮಾಡದಿರುವುದು ಅಪರಾಧವಾಗುತ್ತದೆ. ಕಡ್ಡಾಯ ಮತದಾನ ಮಾಡದಿದ್ದರೆ, ದಂಡವನ್ನು ವಿಧಿಸುತ್ತಾರೆ. ಆದರೆ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಂಡನೆಗಿಂತ ಜಾಗೃತಿಗೆ ಹೆಚ್ಚಿನ ಮಹತ್ವ. ಜಾಗೃತಿಯ ಮೂಲಕ ಜನರಲ್ಲಿ ಅರಿವನ್ನು ಮೂಡಿಸಿ ಮತದಾನ ಮಾಡಲು ಆದ್ಯತೆ;. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಮತದಾನ ಮಾಡದಿರುವುದು ದುರಂತ. ಈ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮತದಾನದ ಜಾಗೃತಿಯನ್ನು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

    ಚುನಾವಣೆ ಸಂದರ್ಭದಲ್ಲಿ ನ್ಯಾಯಾಲಯದ ದಂಡಸಂಹಿತೆಯ ಪ್ರಕಾರ ಕಾನೂನು ಬಾಹಿರ ಚಟುವಟಿಕೆಗಳಿಗೆ ಇರುವ ಶಿಕ್ಷೆಗಳ ಕುರಿತು ನ್ಯಾಯಾಧೀಶರು ಸವಿವರ ಮಾಹಿತಿ ನೀಡಿದರು. ಮತದಾರರಲ್ಲಿ ಮತದಾನದ ಅರಿವು ಮೂಡಿಸುವಿಕೆಗೆ ಚುನಾವಣಾ ಆಯೋಗ ಈ ಸಾಲಿನಲ್ಲಿ ಮಿಲೆನಿಯಂ ಮತದಾರರನ್ನು ಆರಿಸಿ ತಮ್ಮ ಸುತ್ತಲಿನ ಸಮಾಜವನ್ನು ಪರಿವರ್ತಿಸಲು ನಿರ್ಧರಿಸಿದೆ. ಈ ಬಾರಿಯ ಚುನಾವಣೆಯ ವಿಶೇಷ ಆಕರ್ಷಣೆ ಮಿಲೆನಿಯಮ್ ಮತದಾರರು. 2000 ನೇ ಇಸವಿಯ ಜನವರಿಯಿಂದ ನಂತರ ಹುಟ್ಟಿದವರು. ಇವರನ್ನು ಚುನಾವಣಾ ಪ್ರಕ್ರಿಯೆಯ ರಾಯಭಾರಿಗಳಂತೆ ಬಳಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇಂದು ದೇಶದಾದ್ಯಂತ ಆಚರಿಸುವ ರಾಷ್ಟ್ರೀಯ ಮತದಾರರ ದಿನದಲ್ಲಿ ಅವರಿಗೆ ವಿಶೇಷ ಮತದಾರರ ಕಾರ್ಡ್ ವಿತರಿಸಲಾಗುವುದು. ಜಾಗೃತ ಮತದಾರನೇ ಗಣರಾಜ್ಯದ ಜೀವಾಳ ಎಂದರು.

    ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಮಾತನಾಡಿ, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿದರೆ ಉತ್ತಮ ಸರಕಾರವನ್ನು ನಿರ್ಮಾಣ ಮಾಡಬಹುದು. ಆಡಳಿತಕ್ಕೆ ಬರುವವರು ಮತದಾನದ ಮೂಲಕವೇ ಬರಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಚುನಾವಣಾ ಆಯೋಗದ ಧ್ಯೇಯವಾಕ್ಯ ‘ಸುಗಮ್ಯ ಚುನಾವಣೆ’ಎಲ್ಲ ವರ್ಗದವರು ವಿಶೇಷವಾಗಿ ವಿಕಲಚೇತನರು ಮತದಾನ ಮಾಡಲು ಸಹಾಯವಾಗುವಂತೆ ಅವರಿಗೆ ಬೇಕಾದ ವೀಲ್‍ಚಯರ್, ರ್ಯಾಂಪ್‍ಗಳನ್ನು ರಚಿಸಲಾಗಿದೆ. ಕಣ್ಣು ಕಾಣದವರಿಗೆ ಬ್ರೈಲ್‍ಲಿಪಿಗಳ ಮೂಲಕ ಮತ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

    ಅರ್ಹ ಮತದಾರರನ್ನು ಮತದಾರರಪಟ್ಟಿಗೆ ಸೇರಿಸಲಾಗಿದ್ದು, ಮರಣಹೊಂದಿದವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವಿದೇಶದಲ್ಲಿ ಶಾಶ್ವತವಾಗಿ ವಾಸವಾಗಿರುವವರ ಹೆಸರನ್ನು ಕೈಬಿಡಲಾಗಿದ್ದು. ಮತದಾನವನ್ನು ಪ್ರಮಾಣೀಕರಿಸಲು ಹೊಸ ವಿವಿಪ್ಯಾಟ್‍ನ್ನು ಮತದಾನದ ಯಂತ್ರಗಳಲ್ಲಿ ಬಳಸಲಾಗಿದೆ. ಅಧಿಕೃತವಾಗಿ ಬರುವ ಮಾಹಿತಿಯನ್ನಷ್ಟೆ ವಿದ್ಯಾರ್ಥಿಗಳು ಅರಿತು ಅನಧಿಕೃತ ವಾಟ್ಸಪ್ ಸಂದೇಶಗಳನ್ನು ಮತದಾನದ ವಿಷಯದಲ್ಲಿ ನಂಬದಿರಿ ಎಂದು ಸಲಹೆ ಮಾಡಿದರು.

    ಈ ಸಂದರ್ಭದಲ್ಲಿ ಮಿಲೇನಿಯಂ ಮತದಾರರಲ್ಲಿ ಎಂಟು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಗುರುತು ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ವೀಪ್‍ನಡಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಶ್ರೇಯಸ್ ಕೋಟ್ಯಾನ್‍ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *