LATEST NEWS
8ನೇ ಪರಿಚ್ಛೇದಕ್ಕೆ ತುಳು, ಬಂಜಾರ ಭಾಷೆ ಸೇರ್ಪಡೆ ಬೇಡಿಕೆ: ನಿಗದಿತ ಮಾನದಂಡಗಳಿಲ್ಲ

ನವದೆಹಲಿ, ಮಾರ್ಚ್ 29: ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಸೇರಿದಂತೆ ಹಲವು ಭಾಷೆಗಳ ಸೇರ್ಪಡೆಗೆ ಬೇಡಿಕೆ ಇದೆ. ಆದರೂ, ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಯಾವುದೇ ಭಾಷೆಯನ್ನು ಪರಿಗಣಿಸಲು ನಿಗದಿತ ಮಾನದಂಡಗಳಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಮಂಗಳವಾರ ತಿಳಿಸಿದರು.
ತುಳು ಹಾಗೂ ಬಂಜಾರ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಕಲಬುರ್ಗಿಯ ಬಿಜೆಪಿ ಸಂಸದ ಡಾ. ಉಮೇಶ ಜಾಧವ್ ಕೇಳಿರುವ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘ಎಂಟನೇ ಪರಿಚ್ಛೇದಕ್ಕೆ ಭಾಷೆಗಳ ಸೇರ್ಪಡೆಗೆ ಕಾಲ ಕಾಲಕ್ಕೆ ಬೇಡಿಕೆಗಳು ಬಂದಿವೆ’ ಎಂದಿದ್ದಾರೆ.

‘ಸಂಸ್ಕೃತ-ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವ ಇಲ್ಲ’: ‘ಸಂಸ್ಕೃತವನ್ನು ಸಂವಹನ ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿಲ್ಲ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಸುಬ್ರತ್ ಪಾಠಕ್ ಅವರು, ‘ಹಿಂದಿ ಭಾಷೆಯ ಜೊತೆಗೆ ಸಂಸ್ಕೃತವನ್ನೂ ಸಂವಹನ ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡಲು ಸರ್ಕಾರ ಚಿಂತಿಸುತ್ತಿದೆಯೇ’ ಎಂದು ಕೇಳಿದ ಪ್ರಶ್ನೆಗೆ ಮಿಶ್ರಾ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.