LATEST NEWS
ಆಗಸದಲ್ಲೇ ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಜಖಂ – ಸೇಫ್ ಆಗಿ ಲ್ಯಾಂಡ್ ಆದ 227 ಮಂದಿ ಪ್ರಯಾಣಿಕರು

ನವದೆಹಲಿ ಮೇ 22: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಆಗಸದಲ್ಲೇ ಆಲಿಕಲ್ಲು ಹೊಡೆದ ಪರಿಣಾಮ ವಿಮಾನದ ಮುಂಭಾಗ ಜಖಂಗೊಂಡ ಘಟನೆ ನಡೆದಿದ್ದು, 227 ಮಂದಿ ಪ್ರಯಾಣಿಕರಿದ್ದ ವಿಮಾನ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಸಂಜೆ ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ದೊಂದಿಗೆ ತುರ್ತು ಪರಿಸ್ಥಿತಿ ಘೋಷಿಸಿದರು.

6E2142 ವಿಮಾನವು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ ಸೇಫ್ ಆಗಿದ್ದಾರೆ. ಪೈಲಟ್‌ಗಳ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ (Nose damage) ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.