DAKSHINA KANNADA
ಕಾಸರಗೋಡು: ನಾಗರಿಕ ಸಮಿತಿ ಸದಸ್ಯರಿಂದ ಪಿಲಿಕ್ಕೋಡ್ ರಾಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶ

ಕಾಸರಗೋಡು ಎಪ್ರಿಲ್ 14: ಶತಮಾನಗಳಷ್ಟು ಹಳೆಯದಾದ ಪದ್ಧತಿಯನ್ನು ಧಿಕ್ಕರಿಸಿ, 16 ಜನರ ಸುಧಾರಣಾವಾದಿ ಗುಂಪು ಭಾನುವಾರ ಬೆಳಿಗ್ಗೆ ಪಿಲಿಕೋಡ್‌ನಲ್ಲಿರುವ ಶ್ರೀ ರಾಯರಮಂಗಲಂ ಭಗವತಿ ದೇವಸ್ಥಾನದ ‘ನಲಂಬಲಂ’ (ಒಳಾಂಗಣ) ಪ್ರವೇಶಿಸಿ, ಗರ್ಭಗುಡಿಯ ಮುಂದೆ ಪ್ರಾರ್ಥನೆ ಸಲ್ಲಿಸಿದೆ.
ಕಣ್ಣೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ದೇವಸ್ವಂ ಬೋರ್ಡ್ (ಮುಜರಾಯಿ) ಅಧೀನದ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ವಿವಿಧ ಸಮುದಾಯದ ಜನರಿಗೆ ಮಾತ್ರ ಒಳಾಂಗಣಕ್ಕೆ ಪ್ರವೇಶವಿದೆ. ಈ ಅವಕಾಶವನ್ನು ಎಲ್ಲರಿಗೂ ಒದಗಿಸಬೇಕು ಎಂದು ನಾಗರಿಕರ ಸಮಿತಿ ಒತ್ತಾಯಿಸಿತ್ತು. ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಕಾರ್ಯಗಳು ಈಚೆಗೆ ನಡೆದಿದ್ದವು. ಆಗ ಈ ವಿಷಯ ಚರ್ಚೆಗೆ ಬಂದಿತ್ತು. ಪುನರ್ ಪ್ರತಿಷ್ಠಾ ಕಾರ್ಯದ ನಂತರವೂ ಹಿಂದಿನ ಸಂಪ್ರದಾಯ ಮುಂದುವರಿಸಿದ್ದನ್ನು ವಿರೋಧಿಸಿ ಭಾನುವಾರ ಬೆಳಿಗ್ಗೆ 16 ಮಂದಿ ಮತ್ತು ಮಧ್ಯಾಹ್ನ ಇನ್ನಷ್ಟು ಜನರು ಒಳಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದೇವಸ್ಥಾನದ ಆಚರಣೆ ಪ್ರಕಾರ ಇಲ್ಲಿ ಯಾವುದೇ ಜಾತಿ ಆಧಾರದಲ್ಲಿ ಯಾರಿಗೂ ಪ್ರವೇಶ ನಿಷೇಧ ಇಲ್ಲ. ಆದರೆ ಪೂಜಾದಿ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವವರು ಮಾತ್ರ ಒಳಾಂಗಣಕ್ಕೆ ಹೋಗುತ್ತಾರೆ. ವಾದ್ಯ ನುಡಿಸುವ ಮಾರಾರ್, ಮಾಲೆ ಕಟ್ಟುವ ವಾರಿಯರ್ ಸಮುದಾಯದವರು ಒಳಗೆ ಹೋಗುತ್ತಾರೆ. ಅದೇ ಸಮುದಾಯದ ಇತರರಿಗೆ ಒಳಾಂಗಣಕ್ಕೆ ಪ್ರವೇಶ ಇಲ್ಲ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರವೀಂದ್ರನ್ ತಿಳಿಸಿದ್ದಾರೆ. ಆದರೆ ಕೆಲವರು ನಿರ್ದಿಷ್ಟ ಜಾತಿಯವರು ಮಾತ್ರ ಒಳಗೆ ಹೋಗುತ್ತಾರೆ ಎಂಬುದು ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ದೇವಸ್ಥಾನ ಒಳಾಂಗಣ ಪ್ರವೇಶಿಸಿದ ನಾಗರೀಕ ಸಮಿತಿ ಸದಸ್ಯರು ಹಲವು ವರ್ಷಗಳ ಹಿಂದೆ ಭಕ್ತರಿಗೆ ದೇವಾಲಯದ ಆವರಣದ ಹೊರ ಗಡಿಯವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು. ಇತ್ತೀಚಿನ ದಿನಗಳಲ್ಲಿಯೂ ಸಹ, ಇದು ಒಳಾಂಗಣ ಆಚೆಗೆ ಸೀಮಿತವಾಗಿತ್ತು, ಒಳಗಿನ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ.” ಇತ್ತೀಚಿನ ಪುನರ್ ಪ್ರತಿಷ್ಠಾ ಸಂದರ್ಭ ಭಕ್ತರು ದೇವಸ್ಥಾನದ ಆವರಣ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮಲಬಾರ್ ದೇವಸ್ವಂ ಮಂಡಳಿ ಸೇರಿದಂತೆ ದೇವಾಲಯದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರು, ಸಂಸದರು ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿ ನೀಡಿದ್ದರು.
ಅದು ಜಾರಿಯಾಗದ ಕಾರಣ ರಾಜಕೀಯ ಪಕ್ಷಗಳು ಮತ್ತು ಯುವಸಮುದಾಯದ ಪ್ರತಿನಿಧಿಗಳನ್ನು ಸೇರಿಸಿ ಸಮಿತಿ ರಚಿಸಲಾಗಿತ್ತು. ‘ಪುನರ್ ಪ್ರತಿಷ್ಠಾ ಉತ್ಸವದ ಸಂದರ್ಭದಲ್ಲಿ ಊರ ಜನರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗಿದೆ. ಆದರೂ ಒಳಾಂಗಣದಲ್ಲಿ ನಿಂತು ದರ್ಶನ ಪಡೆಯುವ ಭಾಗ್ಯ ಒದಗಲಿಲ್ಲ. ಅಲ್ಲದೆ ದೇವಸ್ಥಾನದ ತಂತ್ರಿಯವರಲ್ಲಿ ಕೇಳಿದಾಗಿ ಪ್ರವೇಶ ಮಾಡಲು ಬಯಸುವವರು ಹೋಗಬಹುದು , ಆದರೆ ಪ್ರವೇಶಿಸಿದ ನಂತರ ಏನಾಗಬಹುದು ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ. ಈ ಹಿನ್ನಲೆ ಈಗ ನಾವು ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದೇವೆ ಎಂದು ನಾಗರೀಕ ಸಮಿತಿ ಸದಸ್ಯರು ತಿಳಿಸಿದ್ದಾರೆ.