BELTHANGADI
ಕಾಂತಾರ ಸಿನೆಮಾ ನೆನಪಿಸಿದ ಘಟನೆ – ದೈವಾರಾಧನೆ ವೇಳೆ ಕುಸಿದು ಬಿದ್ದು ಮೃತಪಟ್ಟ ದೈವನರ್ತಕನ ಮಕ್ಕಳಿಗೆ ಸಿಕ್ಕ ದೀಕ್ಷೆ ಬೂಳ್ಯ

ಬೆಳ್ತಂಗಡಿ ಜನವರಿ 27: ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ಚಿತ್ರ ಕಾಂತಾರದ ದೃಶ್ಯವೊಂದನ್ನು ನೆನಪಿಸುವ ಮತ್ತು ತುಳುನಾಡಿನ ದೈವಾರಾಧನೆಗೆ ಸಂಬಂಧಪಟ್ಟಂತೆ ಚಿತ್ರದಲ್ಲಿ ಮೂಡಿಬಂದ ಎಲ್ಲವೂ ವಾಸ್ತವಕ್ಕೆ ಅತ್ಯಂತ ಹತ್ತಿರವಿರುವ ಸಂಗತಿಗಳು ಅನ್ನೋದನ್ನು ರೂಪಿಸುವ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಎಲ್ಲೆಡೆ ಭಾರೀ ಸುದ್ಧಿ ಮಾಡಿತ್ತು.
ಈ ರೀತಿ ಅವಘಢ ದೈವಾರಾಧನೆ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಾಗ ಸಾಮಾನ್ಯವಾಗಿಯೂ ಎಲ್ಲರ ಕುತೂಹಲಕ್ಕೂ ಕಾರಣವಾಗುತ್ತದೆ. ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲ ಅಕಾಲಿಕ ಸಾವನ್ನಪ್ಪಿದ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನೆಯಲ್ಲಿ ಕಂಡುಬಂದಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಯಿತು.

ಈ ನೇಮಕ ಪ್ರಕ್ರಿಯೆಯ ಹಿಂದೆ ದೈವಾರಾಧನೆಯ ಎಲ್ಲಾ ಕಟ್ಟುಪಾಡುಗಳು ಅನ್ವಯವಾಗುತ್ತಿದ್ದು, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ನರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಜನಕಾರಿಯಾಗಿದೆ.
ಯಾವ ರೀತಿ ಕಾಂತಾರಾ ಚಿತ್ರದಲ್ಲಿ ಇದೇ ರೀತಿಯ ಒಂದು ದೃಶ್ಯ ಕಂಡ ಬಂದಾಗ ದೈವ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಅನಾವರಣವಾಗಿತ್ತೋ, ಅದೇ ರೀತಿಯ ಸನ್ನಿವೇಶ ಎಡಮಂಗಲದಲ್ಲೂ ನಿರ್ಮಾಣವಾಗಿತ್ತು. ದೈವದ ನರ್ತನ ಸೇವೆಯನ್ನು ಪಡೆದ ಯುವಕರ ಕಣ್ಣಲ್ಲಿ ಆನಂದಭಾಷ್ಪ ಕಂಡರೆ,ಕುಟುಖಬದ ಸದಸ್ಯರಲ್ಲಿ ಧನ್ಯತೆಯ ಭಾವ ಕಂಡು ಬಂದಿತ್ತು. ದೈವ ನರ್ತಕನ ದೀಕ್ಷೆ ಬೂಳ್ಯ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗು ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ನಾಲ್ಜೂರು, ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ.
ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ ವಿಚಾರವೂ ಆಗಿದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ. ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ ಹಾಗು ಪರವೂರಿನ ದೈವಭಕ್ತರು ಭಾಗವಹಿಸೋದು ತುಳುನಾಡಿನ ದೈವಾರಾಧನೆಯ ವಿಶೇಷತೆಯೂ ಆಗಿದೆ.