DAKSHINA KANNADA
ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಪತ್ತೆ
ಪುತ್ತೂರು ಜುಲೈ 21: ಸರ್ವೆ ಗ್ರಾಮದ ಗೌರಿ ಹೊಳೆಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕನನ್ನು ಕಡಬ ತಾಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರಗೌಡ ಎಂಬವರ ಪುತ್ರ ಸನ್ಮಿತ್(21) ಎಂದು ಗುರುತಿಸಲಾಗಿದೆ.
ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ಮಹೇಂದ್ರ ಶೋರೂಂನಲ್ಲಿ ಉದ್ಯೋಗಿಯಾಗಿದ್ದ ಸನ್ಮಿತ್ ಅವರು ತನ್ನ ದ್ವಿಚಕ್ರ ವಾಹನದಲ್ಲಿ ಶನಿವಾರ ತಾನು ಕೆಲಸ ಮಾಡುತ್ತಿದ್ದ ಶೋರೂಂನಿಂದ ರಾತ್ರಿ ಮನೆಗೆ ಹೊರಟವರು ನಾಪತ್ತೆಯಾಗಿದ್ದರು. ಇವರ ವಾಹನವು ಗೌರಿ ಹೊಳೆಯ ಬದಿಯಿಂದ ಸುಮಾರು 150 ಮೀಟರ್ ಬಳಿ ಪತ್ತೆಯಾಗಿತ್ತು.
ರೈಲ್ವೆ ಮೇಲ್ಸೇತುವೆ ಸಮೀಪ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿ ಸನ್ಮಿತ್ ಅವರ ಸ್ಕೂಟರ್, ಹೆಲ್ಮೆಟ್, ರೈನ್ಕೋಟ್, ಮೊಬೈಲ್ ಪೋನ್, ಪರ್ಸ್, ಟಿಫಿನ್ ಬಾಕ್ಸ್ ಪತ್ತೆಯಾಗಿದ್ದು, ಆತ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಚಂದ್ರ ಗೌಡರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಹೊಳೆಯಲ್ಲಿ ಸನ್ಮಿತ್ಗಾಗಿ ಹುಡುಕಾಟ ನಡೆಸಿದ್ದಾರೆ. ಇಂದು ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.