LATEST NEWS
ಇಬ್ಬರು ಸಿಬಂದಿಗೆ ಕೊರೊನಾ ಸೋಂಕು ; ಡಿಸಿಸಿ ಬ್ಯಾಂಕ್ ಸೀಲ್ ಡೌನ್ !!

ಮಂಗಳೂರು, ಜುಲೈ 23: ಮಂಗಳೂರು ನಗರ ಭಾಗದಲ್ಲಿ ಕೊರೊನಾ ತೀವ್ರ ಗತಿಯಲ್ಲಿ ಹರಡುತ್ತಿದ್ದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಗೂ ವಕ್ಕರಿಸಿದೆ. ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಇಬ್ಬರಿಗೆ ಪಾಸಿಟಿವ್ ಆಗಿದ್ದು ನಿನ್ನೆಯಿಂದ ಬ್ಯಾಂಕ್ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ.
ಇದೇ ವೇಳೆ ಡಿಸಿಸಿ ಬ್ಯಾಂಕಿನ ಯೆಯ್ಯಾಡಿ ಶಾಖಾ ಕಚೇರಿಯಲ್ಲಿ ಮ್ಯಾನೇಜರ್ ಮತ್ತು ಅಟೆಂಡರ್ ಗೆ ಪಾಸಿಟಿವ್ ಆಗಿದ್ದು ಬ್ಯಾಂಕ್ ಕಚೇರಿಯನ್ನು ಬಂದ್ ಮಾಡಲಾಗಿದೆ. ಕಳೆದ ಶನಿವಾರ ಯೆಯ್ಯಾಡಿ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದ ಹಾಸನ ಮೂಲದ ಯುವಕನೊಬ್ಬನಿಗೆ ದಿಢೀರ್ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಆತನನ್ನು ಸೋದರನ ಜೊತೆಗೆ ಹಾಸನಕ್ಕೆ ಒಯ್ಯಲಾಗಿತ್ತು. ಭಾನುವಾರ ಅಲ್ಲಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಮರುದಿನ ಸೋಮವಾರ ಆತನಿಗೆ ಕೊರೊನಾ ಇರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಯುವಕನ ಜೊತೆಗೆ ಒಂದೇ ಕೊಠಡಿಯಲ್ಲಿ ವಾಸವಿದ್ದ ಇತರೇ ಸಿಬಂದಿಯನ್ನು ಬ್ಯಾಂಕಿಗೆ ಬರದಂತೆ ಸೂಚಿಸಲಾಗಿತ್ತು. ಯೆಯ್ಯಾಡಿ ಶಾಖಾ ಕಚೇರಿಯನ್ನು ಕೂಡ ಬಂದ್ ಮಾಡಲಾಗಿತ್ತು. ಮೂರು ದಿನದ ಬಳಿಕ ಯುವಕನ ಜೊತೆಗೆ ಕೊಠಡಿಯಲ್ಲಿದ್ದ ಸಿಬಂದಿಗೆ ಸೋಂಕು ಕಾಣಿಸಿದೆ. ಪ್ರಧಾನ ಕಚೇರಿಯಲ್ಲಿ ಎಡ್ಮಿನಿಸ್ಟ್ರೇಟಿವ್ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ಒಬ್ಬರು ಸಿಬಂದಿ ಮತ್ತು ಅಟೆಂಡರ್ ಒಬ್ಬರಿಗೆ ಪಾಸಿಟಿವ್ ಆಗಿದ್ದು ಬ್ಯಾಂಕ್ ಕಟ್ಟಡವನ್ನು ಸ್ಯಾನಿಟೈಸ್ ಮಾಡುವುದಕ್ಕಾಗಿ ನಾಲ್ಕು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಇನ್ನು ಪಾಸಿಟಿವ್ ಆದ ಸಿಬಂದಿಯ ಸಂಪರ್ಕದಲ್ಲಿದ್ದ ಇತರೇ ಸಿಬಂದಿಯನ್ನು ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ.