Connect with us

LATEST NEWS

ಮೂಲದಾಖಲೆ ಹಿಂದಿರುಗಿಸಿ ಅಥವಾ ಕ್ರಿಮಿನಲ್ ಕೇಸ್ ಎದುರಿಸಿ :DC ಎಚ್ಚರಿಕೆ

ಮೂಲದಾಖಲೆ ಹಿಂದಿರುಗಿಸಿ ಅಥವಾ ಕ್ರಿಮಿನಲ್ ಕೇಸ್ ಎದುರಿಸಿ :DC ಎಚ್ಚರಿಕೆ

ಮಂಗಳೂರು,ಸೆಪ್ಟಂಬರ್ :28 : ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶ ಸಂದರ್ಭದಲ್ಲಿ ಪಡೆದುಕೊಂಡ ಎಲ್ಲಾ ಮೂಲ ದಾಖಲೆಗಳನ್ನು ಕೂಡಲೇ ಹಿಂದಿರುಗಿಸಬೇಕು. ಇಲ್ಲದಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಎಚ್ಚರಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ನಿಯಮಾನುಸಾರ ವಿದ್ಯಾರ್ಥಿಗಳ ಮಾರ್ಕ್ ಕಾರ್ಡ್ ಸೇರಿದಂತೆ ಪ್ರವೇಶ ಸಂದರ್ಭದಲ್ಲಿ ಪಡೆದ ಮೂಲ ಶೈಕ್ಷಣಿಕ ದಾಖಲೆಗಳನ್ನು ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿಟ್ಟುಕೊಳ್ಳುವಂತಿಲ್ಲ. ಆದರೆ, ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಹೋದರೆ ಅಥವಾ ಆ ಶಿಕ್ಷಣ ಸಂಸ್ಥೆಯನ್ನು ತ್ಯಜಿಸಿದರೆ ಶಿಕ್ಷಣ ಸಂಸ್ಥೆಗಳು ಪೂರ್ತಿ ಕೋರ್ಸಿನ ಎಲ್ಲಾ ವರ್ಷದ ಶುಲ್ಕವನ್ನು ಕಟ್ಟುವಂತೆ ಸೂಚಿಸಿ, ಇಲ್ಲದಿದ್ದರೆ ಮೂಲದಾಖಲೆಗಳನ್ನು ನೀಡದೆ ಸತಾಯಿಸುತ್ತಿರುವ ಹಲವಾರು ದೂರುಗಳು ಬರುತ್ತಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ತಾವು ತೆಗೆದಿರಿಸಿಕೊಂಡ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಮುಂದಿನ ಒಂದು ತಿಂಗಳೊಳಗೆ ಹಿಂದಿರುಗಿಸಬೇಕು. ಈ ಬಗ್ಗೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ಕಳುಹಿಸಲಾಗುವುದು. ನಂತರ ಆಯಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗುವುದು. ನಂತರ ಯಾವುದೇ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ತೆಗೆದಿರಿಸಿದ ಪ್ರಕರಣ ಕಂಡುಬಂದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿ ಸ್ನೇಹಿ ವಾತಾವರಣ ರೂಪಿಸಲು ಸೂಚನೆ:

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಮಾತನಾಡಿ, ಜಿಲ್ಲೆಯ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿ ಸ್ನೇಹಿ ವಾತಾವರಣ ರೂಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‍ಗಳ ಮೂಲಭೂತ ಸೌಕರ್ಯಗಳ ಅಲ್ಲಿನ ಆಡಳಿತ ವ್ಯವಸ್ಥೆಗಳನ್ನು ಆಗಿಂದಾಗ್ಗೆ ತಪಾಸಣೆ ನಡೆಸಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಯಾವುದೇ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗೆ ಆ ಶಿಕ್ಷಣ ಸಂಸ್ಥೆಯಲ್ಲಿ ಕಲಿಯಲು ಇಚ್ಚೆ ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ಸಂಸ್ಥೆಯಿಂದ ಹೊರಬರುವಂತ ವಾತಾವರಣವನ್ನು ಶಿಕ್ಷಣ ಇಲಾಖೆ ಕಲ್ಪಿಸಿಕೊಡಬೇಕು. ಶುಲ್ಕ ಕಟ್ಟಲು ಸತಾಯಿಸುವಂತಹ ಘಟನೆಗಳಿಗೆ ಅವಕಾಶ ನೀಡದೆ, ಈಗಾಗಲೇ ಕಟ್ಟಿರುವ ಶುಲ್ಕವನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಪಾ ಆಳ್ವ ತಿಳಿಸಿದರು.

ಶಿಕ್ಷಣ ಸಂಸ್ಥೆಯನ್ನು ಅರ್ಧದಲ್ಲೇ ತ್ಯಜಿಸುವ ವಿದ್ಯಾರ್ಥಿಗಳಿಗೆ ಮೂಲ ದಾಖಲೆಗಳು ಸಕಾಲದಲ್ಲಿ ಲಭ್ಯವಾದರೆ, ವಿದ್ಯಾರ್ಥಿಗಳು ಎದುರಿಸುತ್ತಿರುವ ಬಹುತೇಕ ಮಾನಸಿಕ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಕೃಪಾ ಆಳ್ವ ತಿಳಿಸಿದರು. ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವ ವಿವಿಧ ಆತ್ಮಹತ್ಯೆ ಹಾಗೂ ಅಸಹಜ ಸಾವಿನ ಪ್ರಕರಣಗಳನ್ನು ಪರಿಶೀಲಿಸಿದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಆನಂದ ಲೋಬೋ, ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಡಿಡಿಪಿಐ ಶಿವರಾಮಯ್ಯ, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *