LATEST NEWS
ಕೇರಳ ಕೊರೊನಾ ಹೆಚ್ಚಳ – ದಕ್ಷಿಣಕನ್ನಡ ಜಿಲ್ಲೆ ಗಡಿಭಾಗಗಳಲ್ಲಿ ಅಲರ್ಟ್
ಕಾಸರಗೋಡು ಜುಲೈ 30: ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಹಿನ್ನಲೆ ಗಡಿ ಜಿಲ್ಲೆ ದಕ್ಷಿಣಕನ್ನಡದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇಂದು ಕೇರಳ ಗಡಿಭಾಗವಾದ ತಲಪಾಡಿಗೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಗಡಿಯಲ್ಲಿ ಕೈಗೊಳ್ಳಲಾಗಿರುವ ಕೋವಿಡ್ ತಪಾಸಣಾ ಕಾರ್ಯಗಳ ಪ್ರಕ್ರಿಯೆಗಳನ್ನು ಕುಲಂಕುಶವಾಗಿ ಪರಿಶೀಲಿಸಿದರು. ಜೊತೆಗೆ ಕಟ್ಟುನಿಟ್ಟಿನ ತಪಾಸಣೆಗೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ , ” ಕೇರಳ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ಕಟ್ಟುನಿಟ್ಟಿನ ತಪಾಸಣೆಗೆ ಸೂಚಿಸಲಾಗಿದೆ. ಕಾಸರಗೋಡು ಹಾಗೂ ಮಂಗಳೂರಿನ ನಡುವೆ ಉದ್ಯೋಗ, ವಿದ್ಯಾಭ್ಯಾಸ, ವಾಣಿಜ್ಯ ಚಟುವಟಿಕೆಗಳಿಗಾಗಿ ಓಡಾಟ ಅನಿವಾರ್ಯವಾಗಿದೆ. ಪ್ರಸ್ತುತ ಒಂದು ಡೋಸ್ ಕೋವಿಡ್ ಲಸಿಕೆ ಅಥವಾ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಪ್ರವೇಶ ಕೊಡಲಾಗುತ್ತಿದೆ. ಆದರೂ ಸೋಂಕು ಪ್ರಸರಣವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರತಿನಿತ್ಯ ಸುಮಾರು 7ರಿಂದ 8 ಸಾವಿರ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು ಇದನ್ನು 10 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.