LATEST NEWS
ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ಕೊರೊನಾ
ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲು
ಮುಂಬೈ, ಜೂನ್ 5: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು ತಗಲಿದೆ. ಪಾಕಿಸ್ಥಾನದ ಕರಾಚಿ ನಗರದ ರಹಸ್ಯ ಸ್ಥಳದಲ್ಲಿ ನೆಲೆಸಿರುವ ದಾವೂದ್ ನನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಆಗಿರುವುದಾಗಿ ಅಲ್ಲಿನ ಮಾಧ್ಯಮಗಳು ಹೇಳಿಕೊಂಡಿವೆ. ಆದರೆ, ಪಾಕಿಸ್ಥಾನ ಸರಕಾರ ಈ ಸುದ್ದಿಯನ್ನು ದೃಢಪಡಿಸಿಲ್ಲ.
ಸೋಂಕಿಗೆ ಒಳಗಾಗಿರುವ ದಾವೂದ್ ನನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾವೂದ್ ಪತ್ನಿ ಮೆಹ್ಸಾಬಿನ್ ಗೂ ಕೊರೊನಾ ಪಾಸಿಟಿವ್ ಆಗಿದ್ದು ಆಕೆಯನ್ನೂ ಆಸ್ಪತ್ರೆಗೆ ದಾಖಲಿಸಿದ್ದು ದಾವೂದ್ ಜೊತೆಗಿದ್ದ ಸಹಚರರನ್ನು ಕ್ವಾರಂಟೈನ್ ಮಾಡಲಾಗಿದೆ.
ಕರಾಚಿಯಲ್ಲಿ ಭಾರೀ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚುತ್ತಿದ್ದು ನಿಯಂತ್ರಣ ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ತಲುಪಿದೆ. ದಾವೂದ್ ಇಬ್ರಾಹಿಂ ಇಬ್ರಾಹಿಂ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು ಭಾರತ ಸರಕಾರ ಆತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಸೇರಿಸಿದೆ.
ಮೋದಿ ಸರಕಾರ ಬಂದ ಬಳಿಕ ದಾವೂದ್ ನನ್ನು ಪಾಕಿಸ್ಥಾನದಿಂದ ವಶಕ್ಕೆ ಪಡೆಯಲು ಪ್ರಯತ್ನ ನಡೆದಿತ್ತು. ಆದರೆ, ದಾವೂದ್ ಪಾಕಿಸ್ಥಾನದಲ್ಲಿರುವುದನ್ನು ಅಲ್ಲಿನ ಸರಕಾರ ಇನ್ನೂ ದೃಢಪಡಿಸಿಲ್ಲ. ದುಬೈ ಮತ್ತು ಭಾರತದಲ್ಲಿ ಬಹಳಷ್ಟು ಆಸ್ತಿ ಹೊಂದಿರುವ ದಾವೂದ್ ಇಬ್ರಾಹಿಂ ಕರಾಚಿಯ ರಹಸ್ಯ ಸ್ಥಳದಲ್ಲಿ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ವಾಸವಿದ್ದಾನೆ ಎನ್ನಲಾಗುತ್ತಿದೆ. ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ದಾವೂದ್ ಕೊರೊನಾ ಸೋಂಕಿನಲ್ಲಿ ಬಚಾವಾಗುತ್ತಾನೆಯೇ ಅನ್ನೋದು ಇನ್ನು ಹದಿನೈದು ದಿನದಲ್ಲಿ ಗೊತ್ತಾಗಲಿದೆ.