FILM
ಗಂಡನ ಮಾನ ರಕ್ಷಣೆಗೆ ಮಾಧ್ಯಮಗಳ ವಿರುದ್ದ ತಡೆಯಾಜ್ಞೆ ತಂದ ನಟ ದರ್ಶನ್ ಪತ್ನಿ
ಬೆಂಗಳೂರು ಜೂನ್ 20: ತನ್ನದೇ ಅಭಿಮಾನಿ ಕೊಲೆ ಪ್ರಕರಣದಲ್ಲಿ ಸಿಲುಕಿ ಇದೀಗ ಜೈಲುಪಾಲಾಗಿರುವ ನಟ ದರ್ಶನ ವಿರುದ್ದ ಯಾವುದೇ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. “ಒಟ್ಟು 38 ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ವರದಿಗಾರರು, ಸುದ್ದಿ ನಿರೂಪಕರು ಹಾಗೂ ಪ್ರತಿವಾದಿ ಮಾಧ್ಯಮಗಳಿಗೆ ಸಂಬಂಧಿಸಿದ ಯಾರೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ, ಆಕೆಯ ಪತಿ ದರ್ಶನ್ ಶ್ರೀನಿವಾಸ್ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿಗೆ ಸಂಬಂಧಿಸಿದ ಅವಿಶ್ವಾಸಾರ್ಹವಾದ ಯಾವುದೇ ಸುದ್ದಿ/ಅಭಿಪ್ರಾಯವನ್ನು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ. ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಜುಲೈ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಪ್ರತಿವಾದಿ ಮಾಧ್ಯಮಗಳು ನ್ಯಾಯಯುತ ಪತ್ರಿಕಾ ಕಸುಬಿನ ನೆಪದಲ್ಲಿ ನ್ಯಾಯ ಮತ್ತು ಮನರಂಜನೆ ನಡುವಿನ ಗೆರೆಯನ್ನು ಮರೆತಿವೆ. ಮಾಧ್ಯಮ ವಿಚಾರಣೆಯ ಮೂಲಕ ಮುಗ್ಧತೆ ಹಾಗೂ ನ್ಯಾಯಯುತ ಕಾನೂನು ಪ್ರಕ್ರಿಯೆ ಮರೆಮಾಚುವ ಕೆಲಸ ಮಾಡುತ್ತಿವೆ. ನಿವೃತ್ತ ಪೊಲೀಸ್ ಅಧಿಕಾರಿಗಳು, ದರ್ಶನ್ ಅವರ ಮಾಜಿ ಉದ್ಯೋಗಿಗಳ ಹೇಳಿಕೆಗಳನ್ನು ಪ್ರಸಾರ ಮಾಡುವ ಮೂಲಕ ಕುಟುಂಬದ ಘನತೆಗೆ ಹಾನಿ ಮಾಡುತ್ತಿದ್ದು, ವಿಶೇಷವಾಗಿ ದರ್ಶನ್ ಅವರನ್ನು ನಡತೆಗೆಟ್ಟವರು ಎಂದು ಬಿಂಬಿಸುತ್ತಿವೆ ಎಂದು ಆಕ್ಷೇಪಿಸಲಾಗಿದೆ.
ಎರಡು ದಿನಗಳಿಂದ ಮಾಧ್ಯಮಗಳು ದರ್ಶನ್ ಮಾತ್ರವಲ್ಲದೇ ಕುಟುಂಬ ಸದಸ್ಯರ ವಿರುದ್ಧ ವೈಯಕ್ತಿಕ ಆರೋಪ ಮಾಡುತ್ತಿದ್ದು, ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನ ದರ್ಶನ್ ಅವರ ವರ್ಚಸ್ಸಿಗೆ ಹಾನಿ ಮಾಡುವ ದುರುದ್ದೇಶ ಹೊಂದಲಾಗಿದೆ. ಮಾನಹಾನಿ ಮತ್ತು ಸತ್ಯಕ್ಕೆ ದೂರವಾದ ಹೇಳಿಕೆ/ವಿಡಿಯೊ ಪ್ರಸಾರ ಮಾಡುವ ಮೂಲಕ ಸುದ್ದಿ ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಿವ ಕೆಲಸ ಮಾಡುತ್ತಿವೆ. ದರ್ಶನ್ ಅವರ ವರ್ಚಸ್ಸಿಗೆ ಹಾನಿ ಮಾಡುವ ಉದ್ದೇಶದಿಂದ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪತ್ರಿಕಾ ಕಸುಬಿನ ಕನಿಷ್ಠ ನೈತಿಕತೆ ಮತ್ತು ಘನತೆಯನ್ನೂ ಕಾಯ್ದುಕೊಳ್ಳದೆ ಕುಂದು ಉಂಟುಮಾಡಿವೆ. ದುರುದ್ದೇಶಪೂರಿತ/ಮಾನಹಾನಿ/ಸತ್ಯಕ್ಕೆ ದೂರವಾದ ಹೇಳಿಕೆಗಳು ನ್ಯಾಯಯುತ ತನಿಖೆ/ವಿಚಾರಣೆಗೆ ಗಂಭೀರ ಬೆದರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ತನ್ನ ಹಾಗೂ ಪತಿ ಮತ್ತು ಕುಟುಂಬದ ಘನತೆ ಮತ್ತು ವರ್ಚಸ್ಸಿಗೆ ರಕ್ಷಣೆ ಒದಗಿಸಬೇಕು ಎಂದು ವಿಜಯಲಕ್ಷ್ಮಿ ಕೋರಿದ್ದಾರೆ.