DAKSHINA KANNADA
ದಲಿತ ಯುವತಿಗೆ ಜಾತಿ ನಿಂದನೆ ಆರೋಪ: ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಯೆದುರು ಧರಣಿ
ಬಜ್ಪೆ, ಜುಲೈ 11: ಕಂದಾವರ ಪಂಚಾಯತ್ ಸದಸ್ಯರೊಬ್ಬರು ದಲಿತ ಯುವತಿಗೆ ಜಾತಿ ನಿಂದನೆಗೈದು ಅಸಭ್ಯವಾಗಿ ಮಾತನಾಡಿದ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸದೇ ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದಲಿತರು ಭಿಮ್ ಸೇನೆಯ ಮುಂದಾಳತ್ವದಲ್ಲಿ ಠಾಣೆಯ ಮುಂಭಾಗ ಪ್ರತಿಭಟನೆ ಆರಂಭಿಸಿದ್ದಾರೆ.
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತ ಕಾಲನಿಯಲ್ಲಿ ನೀರಿನ ಸಮಸ್ಯೆ ಇರುವ ಕುರಿತು ಯುವತಿ ವಾರ್ಡ್ ನ ಸದಸ್ಯೆ ಸವಿತಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ಸವಿತಾ ಅವರು ಯುವತಿ ಕರೆ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಸುದರ್ಶನ್ ಎಂಬಾತನಿಗೆ ನೀಡಿದ್ದು ಆತ ಕರೆಮಾಡಿ ಸಂತ್ರಸ್ತೆ ಜೊತೆ ಅಸಭ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಸಂತ್ರಸ್ತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿಯ ಸಹೋದರ ಚರಣ್ ಆರೋಪಿಸಿದ್ದಾರೆ. ದೂರು ನೀಡಿದ ಬಳಿಕ ಆರೋಪಿ ಸುದರ್ಶನ್ ನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಆತನನ್ನು ವಿಚಾರಣೆಗೊಳಡಿಸುವ ಬದಲು ರಾಜ ಮರ್ಯಾದೆಯೊಂದಿಗೆ ರಕ್ಷಣೆ ನೀಡಿ ಪೊಲೀಸ್ ಠಾಣೆಯಿಂದ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಂತ್ರಸ್ತ ಯುವತಿಯ ಸಹೋದರ ದಲಿತ ಸಂಘಟನೆಗಳಿಗೆ ದೂರು ನೀಡಿದ್ದು, ಸದ್ಯ ದಲಿತ ಸಂಘಟನೆಗಳು ಭೀಮ್ ಸೇನೆಯ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಮುಂದೆ ಧರಣಿ ಆರಂಭಿಸಿವೆ ಎಂದು ತಿಳಿದು ಬಂದಿದೆ.
You must be logged in to post a comment Login