KARNATAKA
ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!, ಕಾರಣವೇನು ಗೊತ್ತಾ ?
ಗದಗ, ನವೆಂಬರ್ 13: ಸವರ್ಣಿಯರು ದಲಿತರನ್ನು ಬಹಿಷ್ಕಾರ ಹಾಕುವುದನ್ನು ನೋಡಿದ್ದೆವೆ, ಕೇಳಿದ್ದೇವೆ. ಆದರೆ ಇಲ್ಲಿ ದಲಿತರೇ ದಲಿತರನ್ನ ಬಹಿಷ್ಕಾರ ಹಾಕಿದ್ದಾರೆ. ಪ್ರೀತಿ ವಿಚಾರಕ್ಕಾಗಿಯೇ ಗ್ರಾಮದ ಆ ಕುಟುಂಬದ ಮನೆಗಳು ಧ್ವಂಸವಾದವು. ಏಕಾಏಕಿ ಮನೆ ಖಾಲಿ ಮಾಡಿಸಿ, ಇಡೀ ಸಮುದಾಯವೇ ಆ ಒಂದು ಕುಟುಂಬವನ್ನು ಕುಲದಿಂದ ಬಹಿಷ್ಕಾರ ಹಾಕಿದೆ. ದಿಕ್ಕು ಕಾಣದೇ ಕುಟುಂಬ ಬೀದಿಗೆ ಬಂದಿದೆ. ಮನನೊಂದು ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಎಸ್. ಸಾಬಣ್ಣ ಮಾದರ ಎಂಬ ಕುಟುಂಬಕ್ಕೆ ಈಗ ಬಹಿಷ್ಕಾರ ಹಾಕಲಾಗಿದೆ. ಇವರ ಮಗ ಶಿವಾನಂದ ಮಾದರ ಎಂಬಾತ ಅದೇ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು . ಸಂಬಂಧದಲ್ಲಿ ಶಿವಾನಂದ ಹಾಗೂ ಯುವತಿ ತಂದೆ ಮಗಳಾಗಬೇಕಂತೆ. ಅದನ್ನು ಮರೆತು 2009 ರಲ್ಲಿ ಮದುವೆ ಆದ್ರು. ಆಗ ಯುವತಿ ಕುಟುಂಬಸ್ಥರು ಇವರ ಮೇಲೆ ಕತ್ತಿ ಮಸಿಯಲಾರಂಬಿಸಿದ್ರು. 2009 ರಲ್ಲಿ ಊರು ತೊರೆದು 14 ವರ್ಷ ವನವಾಸ ಮುಗಿಸಿ ಈಗ ಊರಿಗೆ ಬಂದಿದ್ದಾರೆ. ಆದರೂ ಇವರ ಮೇಲಿನ ಸಿಟ್ಟು, ಕೋಪ ಇನ್ನೂ ತನ್ನಗಾಗಿಲ್ಲ. ದಲಿತ ಸಮಾಜದಿಂದ ನಮ್ಮನ್ನು ಬಹಿಷ್ಕಾರ ಹಾಕಿದ್ದಾರೆ.
ಊರಿನವರು ಯಾರೇ ನಮ್ಮನ್ನು ಮಾತನಾಡಿಸಿದ್ರೆ, ಸಹಾಯ ಮಾಡಿದ್ರೆ ಅವರಿಗೂ ಒಂದು ಸಾವಿರ ದಂಡ ಹಾಗೂ ಶಿಕ್ಷೆ ಘೋಷಣೆ ಮಾಡಿದ್ದಾರೆ. ದಲಿತರಿಂದಲೇ ದಲಿತರಿಗೆ ಬಹಿಷ್ಕಾರ ಹಾಕಿ ಅನ್ಯಾಯ ಮಾಡಿದ್ದಾರೆ. ಸಾಕಷ್ಟು ಮನನೊಂದಿದ್ದೇವೆ. ನಮಗೆ ಸಾವೊಂದೇ ಪರಿಹಾರ ಎಂದು ನೊಂದ ಕುಟುಂಬಸ್ಥರು ಹೇಳುತ್ತಿದ್ದಾರೆ. ಶಿವಾನಂದ ಹಾಗೂ ಯುವತಿ ಇಬ್ಬರೂ ಮಾದಿಗ ಜನಾಂಗದವರು. ಆದರೂ ಇಬ್ಬರ ಪ್ರೀತಿ ಕುಟುಂಬದ ನೆಮ್ಮದಿ ಹಾಳು ಮಾಡಿದೆ. ಇತ್ತೀಚೆಗೆ ಯುವತಿ ತಂದೆ ಮೃತಪಟ್ಟ ನಂತರ ಇವರನ್ನು ಊರಿಗೆ ಕರೆಸಿಕೊಂಡಿದ್ದಾರೆ. ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರಂತೆ. 14 ವರ್ಷದ ನಂತರ ಊರಿಗೆ ಬಂದರೂ ದಬ್ಬಾಳಿಕೆ ನಿಲ್ಲುತ್ತಿಲ್ಲವಂತೆ. ಕಳೆದ 3 ದಿನಗಳ ಹಿಂದೆಯಷ್ಟೇ ಈ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. 3 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಮಾಡಿದ ತಪ್ಪಿಗೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಕುಟುಂಬದ 11 ಜನ ಕಳೆದ 3 ದಿನದಿಂದ ಬಿಸಿಲು, ಮಳೆ, ಚಳಿಯಲ್ಲಿ ರಸ್ತೆ ಬದಿ ಕಾಲ ಕಳೆಯುತ್ತಿದ್ದಾರೆ. 2009ರಲ್ಲಿ ಯುವತಿ ಕುಟುಂಬಸ್ಥರಿಂದ 2 ಮನೆ ಧ್ವಂಸಮಾಡಿದ್ದಾರೆ. ನಂತರ 2019 ರಲ್ಲಿ ನವ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾದ ಒಂದು ಮನೆ ಸಹ ಧ್ವಂಸ ಮಾಡಿದ್ದಾರಂತೆ.
ಈಗ ಇದ್ದ ಮನೆ ಸಹ ಖಾಲಿ ಮಾಡಿಸಿದ್ದಾರೆ. ಕುಟುಂಬ ಯಜಮಾನ ಸಾಬಣ್ಣ, ಶಾಂತವ್ವ, ಮಗ ಶಿವಾನಂದ, ಸೊಸೆ, ಮತ್ತೋರ್ವ ಮಗ ಮುತ್ತಣ್ಣ, ರೇಣುಕಾ, ಅಂಜನಾದೇವಿ ಸೇರಿ 5 ಜನ ಮಕ್ಕಳು ಬೀದಿಪಾಲಾಗಿವೆ. ಜೀವನವೇ ಸಾಕಾಗಿದೆ. ನೆಮ್ಮದಿಯಿಂದ ಜೀವನ ಮಾಡಲು ಅನುಕೂಲ ಕಲ್ಪಿಸಿಕೊಡಿ. ಇಲ್ಲವೆ ಸಾಯಲು ಅನುಮತಿ ಕೊಡಿ ಅಂತಿದೆ ನೊಂದ ಕುಟುಂಬ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈಗ ನರಗುಂದ ತಹಶಿಲ್ದಾರ್, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ.