LATEST NEWS
ಕಾಸರಗೋಡು ದಕ್ಷಿಣಕನ್ನಡ ನಡುವೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ ದಕ್ಷಿಣಕನ್ನಡ ಜಿಲ್ಲಾಡಳಿತ
ಮಂಗಳೂರು ಅಗಸ್ಟ್ 16: ಕೊನೆಗೂ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಮಧ್ಯೆ ಮುಕ್ತ ಸಂಚಾರಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ಅವಕಾಶ ನೀಡಿದ್ದು, ಪ್ರಯಾಣಿಕರು ಮಾಸಿಕ ಪಾಸ್ ಪಡೆದು ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಆದರೆ ಕಾಸರಗೋಡು ಜಿಲ್ಲಾಡಳಿತ ಇನ್ನೂ ದಕ್ಷಿಣಕನ್ನಡ ಕಾಸರಗೋಡು ಪ್ರಯಾಣಕ್ಕೆ ಬಿಗು ನಿಯಮಗಳನ್ನು ಹೊಂದಿದ್ದು, 21 ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಿದೆ. ಹೀಗಾಗಿ ದಕ್ಷಿಣಕನ್ನಡ ಜಿಲ್ಲೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ್ದರೂ ಸದ್ಯ ಅದು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಅನ್ಲಾಕ್ 0.3 ಅನ್ವಯ ಈಗಾಗಲೇ ಕೇಂದ್ರ ಸರಕಾರ ಅಂತರ್ ರಾಜ್ಯ ಸಂಚಾರವನ್ನು ಮುಕ್ತಗೊಳಿಸಿದೆ. ಈ ಹಿನ್ನಲೆ ರಾಜ್ಯ ಸರಕಾರ ಆದೇಶದ ಹಿನ್ನಲೆ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ನಡುವಿನ ಸಂಚಾರವನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಕಾಸರಗೋಡು-ದ.ಕ ಸಂಚಾರ ಮುಕ್ತಗಡಿ ಭಾಗಗಳಲ್ಲಿ ದೈನಂದಿನ ಕೆಲಸದ ನಿಮಿತ್ತ ಸಂಚರಿಸುವ ಸಾರ್ವಜನಿಕರು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯಿಂದ ಮಾಸಿಕ ಪಾಸ್ ಪಡೆಯಬೇಕು. ಈ ಸಂದರ್ಭದಲ್ಲಿ ಪ್ರಯಾಣಿಕರು ಚೆಕ್ ಪೋಸ್ಟ್ಗಳಲ್ಲಿ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಕೇರಳದ ನಿವಾಸಿಗಳು ಜಿಲ್ಲೆಯಲ್ಲಿಯೇ ವಾಸಿಸುತ್ತಿದ್ದರೇ ತಕ್ಷಣ ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆದು ತಲಪಾಡಿ ಅಥವಾ ಜಾಲ್ಸೂರು ಮೂಲಕ ಸಂಚರಿಸಬೇಕು. ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಕೋವಿಡ್-19 ಕ್ವಾರೆಂಟೈನ್ ನಿಯಮಕ್ಕೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಓಣಂ ಹಬ್ಬದ ಹಿನ್ನಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆ ಘೋಷಣೆ ಮಾಡಿದೆ. ಈ ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಕೇರಳ ರಾಜ್ಯದ ಜಾಗೃತ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರಯಾಣಿಕ ಪಾಸು ಪಡೆಯಬೇಕು ಎಂದು ಕೇರಳದ ಸಾರಿಗೆ ಸಚಿವ ಎ. ಕೆ. ಸಸೀಂದ್ರನ್ ಹೇಳಿದ್ದಾರೆ.