BANTWAL
ನೇಮೋತ್ಸವಕ್ಕೆ ಏರಿದ ಕೊಡಿ ಇಳಿಯುದರ ಒಳಗಾಗಿ ತಮ್ಮ ಬರಬೇಕು – ಕಾರಣಿಕ ತೋರಿಸಿದ ಅರ್ಕುಳ ಮಗೃಂತಾಯ ದೈವ

ಬಂಟ್ವಾಳ ಮಾರ್ಚ್ 10: ಇಡೀ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ವಿಧ್ಯಾರ್ಥಿ ದಿಗಂತ್ ಪತ್ತೆಗಾಗಿ ಜಿಲ್ಲೆಯ ಇಡೀ ಪೊಲೀಸ್ ಇಲಾಖೆ ನಿದ್ರೆ ಬಿಟ್ಟು ಕೆಲಸ ಮಾಡಿದೆ. ಈ ನಡುವೆ ತಮ್ಮನಿಗಾಗಿ ಅಣ್ಣ ದೈವದಲ್ಲಿ ಮಾಡಿದ ಸಂಕಲ್ಪಕ್ಕೆ ದೈವ ಫಲ ನೀಡಿದ್ದು, ಕೊನೆಗೂ ದಿಗಂತ್ ಪತ್ತೆಯಾಗಿದ್ದಾನೆ. ಈ ಮೂಲಕ ದಿಗಂತ್ ಕುಟುಂಬದ ಭಕ್ತಿಗೆ ತುಳುನಾಡಿನ ಕಾರಣಿಕದ ದೈವ ಒಲಿದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಜಿಲ್ಲೆಯ ಪೊಲೀಸ್ ಇಲಾಖೆಯಂತೂ ನಿದ್ರೆ ಬಿಟ್ಟು ದಿಗಂತ್ ಪತ್ತೆಗಾಗಿ ಶ್ರಮಿಸಿತ್ತು, ಬರೋಬ್ಬರಿ 12 ದಿನಗಳ ಬಳಿಕ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಆದರೆ ದಿಗಂತ್ ಪತ್ತೆ ಹಿಂದೆ ದೈವ ಪವಾಡ ಕಾರಣವಾಗಿತ್ತು ಎಂದು ವರದಿಯಾಗಿದೆ. ದಿಗಂತ್ ಕುಟುಂಬವು ಅರ್ಕುಳ ಉಳ್ಳಾಕುಲು ಮಗೃಂತಾಯ ದೈವದ ಚಾಕರಿ ಮಾಡಿಕೊಂಡು ಬರುತ್ತಿದ್ದಾರೆ. ನಾಲ್ಕು ತಲೆಮಾರುಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೈವಸ್ಥಾನದಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡುವ ದಿಗಂತ್ ಸಹೋದರ ರವಿ ಅವರು ನೇಮೋತ್ಸವ ಸಂದರ್ಭದಲ್ಲಿ ತಮ್ಮನಿಗಾಗಿ ಮನಸಲ್ಲೇ ಸಂಕಲ್ಪ ಮಾಡಿದ್ದರು.

ದೈವದ ನೇಮೋತ್ಸವದ ಧ್ವಜ ಕೆಳಗೆ ಇಳಿಯುದರ ಒಳಗಾಗಿ ನನ್ನ ತಮ್ಮ ಪತ್ತೆಯಾಗಬೇಕು ಎನ್ನುವ ಸಂಕಲ್ಪ ಮಾಡಿದ್ದರು. ನೇಮೋತ್ಸವದ ಸಂದರ್ಭದಲ್ಲಿ ಊರವರು ದೈವದಲ್ಲಿ ವಿಚಾರ ತಿಳಿಸು ಎಂದು ಹೇಳಿದ್ದರು. ಆದರೆ ಸಹೋದರ ರವಿ ದೈವದಲ್ಲಿ ಪ್ರಶ್ನೆ ಕೇಳುದಿಲ್ಲ ನಮ್ಮ ಸೇವೆಗೆ ದೈವ ದಿಗಂತ್ ಪತ್ತೆ ಮಾಡಬೇಕು. ನೇಮೋತ್ಸವ ಸಂದರ್ಭ ಏರಿದ ಕೊಡಿ ಇಳಿಯುದರ ಒಳಗಾಗಿ ತಮ್ಮ ಬರಬೇಕೆಂದು ಹರಕೆ ಹೊತ್ತಿದ್ದರು.
ರವಿವಾರ ದೈವದ ನೇಮೋತ್ಸವದ ಧ್ವಜಾವರೋಹಣ ನಡೆದಿತ್ತು. ಆದರೆ ಶನಿವಾರ ಸಂಜೆಯೇ ದಿಗಂತ್ ಪತ್ತೆಯಾಗಿದ್ದ. ದೈವ ನಮ್ಮ ಕುಟುಂಬದ ಚಾಕರಿಗೆ ಫಲ ನೀಡಿದೆ. ದಿಗಂತ್‌ನನ್ನು ಉಳ್ಳಾಕುಲು ಮಗೃಂತಾಯ ದೈವವೇ ಪತ್ತೆ ಹಚ್ಚಿದೆ ಎಂದು ದಿಗಂತ್ ಸಹೋದರ ರವಿ ಹೇಳಿದರು. ಪೊಲೀಸ್ ಇಲಾಖೆ ಹುಡುಕಾಟದ ಜೊತೆಗೆ ದೈವದ ಬಲದಿಂದ ದಿಗಂತ್ ಮತ್ತೆ ಮನೆಗೆ ಸೇರಿದ್ದಾನೆ. ಕರಾವಳಿಯಲ್ಲಿ ದೈವ ಮತ್ತೆ ತನ್ನ ಕಾರಣಿಕ ತೋರಿಸಿ ತನ್ನ ನಂಬಿದವರನ್ನು ತಾನು ಕೈಬಿಡುವುದಿಲ್ಲ ಎಂದು ಸಾಭಿತು ಪಡಿಸಿದೆ.