LATEST NEWS
ದಿನಕ್ಕೊಂದು ಕಥೆ – ಚಿತ್ರ

ಚಿತ್ರ
ನೆಲದ ಮೇಲೆ ತಳವೂರಿನಿಂತ ಹೊಸಮನೆಯ ಗೋಡೆಯಲ್ಲಿ ಒಂದು ಚಿತ್ರವಿದೆ. ಎಲ್ಲಿದ್ದರೂ ಒಮ್ಮೆ ಹತ್ತಿರ ಹೋಗಿ ನೋಡುತ್ತಾ ನಿಲ್ಲಬೇಕೆನಿಸುವಷ್ಟು ಅಂದವಾಗಿದೆ . ಅಂಬೆಗಾಲಿನಿಂದ ಎದ್ದುನಿಂತು ಕೆಲವು ವರ್ಷ ದಾಟಿದ ಆ ಮನೆಯ ಮಗು ದಿನವೂ ಗಮನಿಸುತ್ತದೆ, ಕಣ್ಣರಳಿಸಿ ನೋಡುತ್ತದೆ.
ಅಲ್ಲಿ ನೀಲಾಕಾಶದ ನಡುವೆ ಆಡುತ್ತಾ ಗಾಳಿಗೆ ಹಾಡುತ್ತಿರೋ ಬೆಳ್ಳಿಮೋಡಗಳು ವಿಶ್ರಾಂತಿ ಪಡೆಯಲು ಹಸಿರ ಹೊದ್ದು ಮಲಗಿದೆ ಬೆಟ್ಟದ ಮರೆಗೆ ಸಾಗುತ್ತಿದೆ. ಆಳಕ್ಕೆ ಬೇರಿಳಿಸಿದ ಕಾರಣ ಎದ್ದುನಿಂತ ಮರಗಳು ಬೆಟ್ಟದ ಹಸಿರನ್ನ ತಾವು ಆವಾಹಿಸಿ ಹಸಿಯಾಗಿದೆ.

ಅಲ್ಲಿ ಬಲಬದಿಯ ಮರವೊಂದರಲ್ಲಿ ಹೂವೆಲ್ಲ ಎಲೆಯನ್ನ ತಮ್ಮ ಮಡಿಲೊಳಗೆ ಮಲಗಿಸಿ ಚಿನ್ನದ ರಂಗನ್ನ ಬೀರುತ್ತಿದೆ . ಕಾಲಮಾನವಿಲ್ಲದ ಚಿತ್ರವಾದರೂ ಕೆಲಸದ ಆರಂಭದ ದೃಶ್ಯದಿಂದ ಮುಂಜಾನೆ ಎಂಬ ಊಹೆಯನ್ನು ತೋರಿಸುತ್ತಿದೆ. ಹಸಿರ ಹಾದಿಯ ನಡುವೆ ಪಾದವೂರಿದ ಮಣ್ಣಿನ ನೆಲದ ಮೇಲೆ ಎತ್ತಿನ ಗಾಡಿಯೊಂದು ಹೊರಟು ನಿಂತಿದೆ.
ಹುಲ್ಲಿನ ಮನೆಯು ಅಂಗಳದ ಬದಿಯಲ್ಲಿ ಸುತ್ತ ನಿಂತ ಮರಗಳೊಂದಿಗೆ ತಂಪಿನಿಂದ ಮಾತುಕತೆಯನ್ನಾಡುತ್ತಿದೆ. ಮನೆಯ ಬಲಕ್ಕೆ ಪಾಚಿ ಹಸಿರಿನ ನೀರಿನ ಕೊಳದಿಂದ ತಾವರೆಗಳೆದ್ದು ನಿಂತು ಹೂಂಗುಟ್ಟುತ್ತಿದೆ.
ರಸ್ತೆಯ ಇನ್ನೊಂದು ಬದಿಗೆ ಬೆರ್ಚಪ್ಪ ಕಾಯೋ ಗದ್ದೆಯಲ್ಲಿ ಕೊಯ್ಲಿನ ಕೆಲಸ ಶುರುವಾಗಿದೆ. ದಣಿವರಿಯದ ಹಲವು ಬಾಗಿದ ದೇಹಗಳು ಪೈರಿಗೆ ಕಟಾವಿನ ವಿಧಿವಿಧಾನ ಪೂರೈಸಿದರೆ, ಕೆಲವು ನಿಂತ ಜೀವಗಳು ಅದನ್ನು ಕಟ್ಟು ಕಟ್ಟುತ್ತಿವೆ. ದುಡಿಮೆಯ ಕಾಯಕದ ಆತನೊಬ್ಬ ಈಚಲ ಮರದಿಂದ ಶೇಂದಿ ಇಳಿಸುವುದರಲ್ಲಿ ನಿರತನಾಗಿದ್ದಾನೆ.
ಗದ್ದೆಗೆ ಮಾತ್ರ ಬೇಲಿ ಇದೆ ಊರ ಮನಸ್ಸುಗಳಿಗಲ್ಲ. ವೈಭವವಿಲ್ಲದ ,ಅಭಿವೃದ್ಧಿ ಎಂಬ ಅನಾಗರಿಕ ಚಿಂತನೆಯಿಲ್ಲದ, ದುಡಿಮೆಯ ಚೈತನ್ಯವಿರುವ , “ನಾನು” ಇಲ್ಲದ ಈ ಚಿತ್ರ ನಾಲ್ಕು ಮೂಲೆಗಳಿಗೆ ಪಟ್ಟಿ ಹೊಡೆದುಕೊಂಡು ನೇತು ಬಿದ್ದಿದೆ. ಮಗೂ ದಿನವೂ ಮನೆಯ ನಾಲ್ಕು ಕಿಟಕಿಯಿಂದ, ತಾರಸಿಯ ಮೇಲಿನಿಂದ, ಗೇಟಿನ ಮರೆಯಿಂದ ದೃಷ್ಟಿ ಹಾಯಿಸುತ್ತಾನೆ ಬರಿಯ ಗಾಡಿ ,ಕಟ್ಟಡ, ಹೊಗೆಯನ್ನ ಕಂಡು ಚಿತ್ರವೊಂದು ಕಲ್ಪನೆಯೆಂಬ ನಿರಾಶೆಯಿಂದ ಮೊಬೈಲ್ನಲ್ಲಿ ಮಗ್ನನಾಗುತ್ತಾನೆ .
ಧೀರಜ್ ಬೆಳ್ಳಾರೆ